2ನೇ ಪತ್ನಿ-ಮಕ್ಕಳಿಗೂ ಜೀವನಾಂಶ ಕೊಡಬೇಕು: ಹೈಕೋರ್ಟ್

ಬೆಂಗಳೂರು, ಫೆ.16: ಹಿಂದೂ ವಿವಾಹ ಕಾಯ್ದೆ ಪ್ರಕಾರ 2ನೆ ಮದುವೆ ಕಾನೂನು ಬಾಹಿರವಾದರೂ, ಅನೈತಿಕವಲ್ಲ ಎಂದಿರುವ ಹೈಕೋರ್ಟ್ ವಿಭಾಗೀಯ ಪೀಠ ಎರಡನೆ ಪತ್ನಿ ಮತ್ತು ಆಕೆಯ ಮಗನಿಗೆ ಜೀವನಾಂಶ ನೀಡಲು ವ್ಯಕ್ತಿಯೊಬ್ಬರಿಗೆ ಅದೇಶಿಸಿದೆ.
ಮೊದಲನೆ ವಿವಾಹವನ್ನು ಮುಚ್ಚಿಟ್ಟು ಎರಡನೆ ಮದುವೆಯಾಗಿರುವ ಪತಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾರೆ. ಹೀಗಾಗಿ ಪತಿಯಿಂದ ದೂರವಿದ್ದು, ಜೀವನಾಂಶ ಕೂಡಿಸಬೇಕು ಎಂದು ಕೋರಿ ಬೆಂಗಳೂರು ನಗರದ ಯಶವಂತಪುರದ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂಕೋರ್ಟ್ ಹಲವು ಪ್ರಕರಣಗಳನ್ನು ಉಲ್ಲೇಖಿಸಿರುವ ಹೈಕೋರ್ಟ್, ಯಾವುದೇ ವ್ಯಕ್ತಿ ತನ್ನ ಮೊದಲಿನ ವಿವಾಹದ ಬಗ್ಗೆ ಮಾಹಿತಿ ನೀಡದೇ ಎರಡನೇ ವಿವಾಹವಾದಲ್ಲಿ ಎರಡನೇ ಪತ್ನಿ ಮತ್ತು ಆಕೆಯ ಮಕ್ಕಳ ಪೋಷಣೆಗೆ ಬದ್ಧನಾಗಿರಬೇಕು. ಅಲ್ಲದೇ, ಜೀವನಾಂಶದ ಉದ್ದೇಶಕ್ಕಾಗಿ ಕಾನೂನು ಬದ್ಧ ಹೆಂಡತಿಯಂತೆ ಪರಿಗಣಿಸಬೇಕು ಎಂದು ತೀರ್ಪು ನೀಡಿದೆ.
ಅಲ್ಲದೇ, ಹಿಂದೂ ವಿವಾಹ ಕಾಯ್ದೆಯ ನಿಯಮಗಳ ಪ್ರಕಾರ ಎರಡನೇ ಮದುವೆ ಅಸಿಂಧುವಾದರೂ, ಅವು ಅನೈತಿಕವಲ್ಲ. ಹೀಗಾಗಿ ಪತ್ನಿ ಆರ್ಥಿಕವಾಗಿ ಪತಿಯನ್ನು ಅವಲಂಬಿಸಿದ್ದು, ಆತನು ಪತ್ನಿ ಮಕ್ಕಳಿಗೆ ಜೀವನಾಂಶ ನಿರಾಕರಿಸಲು ಸಾಧ್ಯವಿಲ್ಲ ಎಂದು ಪೀಠ ತನ್ನ ಅದೇಶದಲ್ಲಿ ಉಲ್ಲೇಖಿಸಿದ.
ಹಾಗೆಯೇ, ಜೀವನಾಂಶ ಪರಿಹಾರ ಕೋರಿರುವ ಮಹಿಳೆಗೆ 3 ಸಾವಿರ ಮತ್ತು ಆಕೆಯ 5 ವರ್ಷದ ಮಗುವಿಗೆ 2 ಸಾವಿರ ರೂಪಾಯಿಯಂತೆ ಮಾಸಿಕ ಪರಿಹಾರ ನೀಡಬೇಕು ಎಂದು ನಿರ್ದೇಶಿಸಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.







