ನಗರೋತ್ಥಾನ: 10 ಜಿಲ್ಲೆಗಳ 30.74 ಕೋಟಿ ರೂ. ಕ್ರಿಯಾ ಯೋಜನೆಗಳಿಗೆ ಅನುಮೋದನೆ

ಬೆಂಗಳೂರು, ಫೆ.16: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ 4ನೆ ಹಂತದಲ್ಲಿನ ಬಾಕಿ ಉಳಿದಿದ್ದ ರಾಜ್ಯದ 10 ಜಿಲ್ಲೆಗಳ 20 ನಗರ ಸ್ಥಳೀಯ ಸಂಸ್ಥೆಗಳ 30.74 ಕೋಟಿ ರೂ.ಗಳ ಕಾಮಗಾರಿಗಳ ಕ್ರಿಯಾ ಯೋಜನೆಗಳಿಗೆ ಪೌರಾಡಳಿತ ಸಚಿವ ಎಂಟಿಬಿ ನಾಗರಾಜು ಅಧ್ಯಕ್ಷತೆಯ ಸಮಿತಿ ಅನುಮೋದನೆ ನೀಡಿದೆ.
ಗುರುವಾರ ವಿಧಾನಸೌಧದಲ್ಲಿ ನಡೆದ ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆ 4ನೇ ಹಂತದ ಯೋಜನೆಗಳ ರಾಜ್ಯ ಮಟ್ಟದ ಸಮಿತಿ ಸಭೆಯಲ್ಲಿ ಸಚಿವ ಎಂಟಿಬಿ ನಾಗರಾಜು, ಈಗಾಗಲೇ ಅನುಮೋದನೆ ನೀಡಿರುವ ಸ್ಥಳೀಯ ಸಂಸ್ಥೆಗಳಲ್ಲಿ ಕಾಮಗಾರಿಗಳ ಪ್ರಗತಿ ಪರಿಶೀಲಿನೆ ನಡೆಸಿದರಲ್ಲದೆ, ಬಾಕಿ ಉಳಿದಿದ್ದ ನಗರ ಸ್ಥಳೀಯಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಿದರು.
ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ 4ನೇ ಹಂತದ ಯೋಜನೆಯ 3,885 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಅದಕ್ಕೆ ಪೂರಕವಾಗಿ ಅನುಮೋದನೆಗಾಗಿ ಜಿಲ್ಲಾಧಿಕಾರಿಗಳ ಮೂಲಕ ಕ್ರಿಯಾ ಯೋಜನೆಗಳು ಸಲ್ಲಿಕೆಯಾಗಿವೆ.
ಈ ಯೋಜನೆಯಡಿ 117 ಪಟ್ಟಣ ಪಂಚಾಯತಿಗಳು ತಲಾ 5 ಕೋಟಿ ರೂ., 124 ಪುರಸಭೆಗಳು ತಲಾ 10 ಕೋಟಿ ರೂ. ಹಾಗೂ 38 ನಗರಸಭೆಗಳು ತಲಾ 30 ಕೋಟಿ ರೂ., 23 ಜಿಲ್ಲಾ ಕೇಂದ್ರದ ನಗರಸಭೆಗಳು ಮತ್ತು 1ನೇ ದರ್ಜೆ ನಗರಸಭೆಗಳು ತಲಾ 40 ಕೋಟಿ ರೂ. ಪಡೆದಿವೆ. ಈ ಹಣದಲ್ಲಿ 2022-23 ರಿಂದ 2023-24ನೇ ಸಾಲಿನ ಹಣಕಾಸು ವರ್ಷದವರೆಗೆ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ಮಳೆ ನೀರು ಚರಂಡಿ ಅಭಿವೃದ್ಧಿ ಮತ್ತು ಕಟ್ಟಡ ನಿರ್ಮಾಣ ಹಾಗೂ ಇತರೇ ಕಾಮಗಾರಿಗಳನ್ನು ಕೈಗೊಳ್ಳಲಿವೆ.
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್, ಪೌರಾಡಳಿತ ಇಲಾಖೆಯ ಮುಖ್ಯ ಇಂಜಿನಿಯರ್ ಸತ್ಯನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು.







