ಗೋವಿಂದರಾಜನಗರದಲ್ಲಿ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ
ಆರೋಗ್ಯ ಕ್ಷೇತ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹೊಸ ಮೈಲುಗಲ್ಲು : ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು, ಫೆ.16: ಆರೋಗ್ಯ ಕ್ಷೇತ್ರದಲ್ಲಿ ಬಾಲಗಂಗಾಧರನಾಥ ಸ್ವಾಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹೊಸ ಮೈಲುಗಲ್ಲನ್ನು ಸೃಷ್ಠಿಸಿದ್ದು, ಧ್ವನಿ ಇಲ್ಲದ ಬಡ ಜನರಿಗೆ ಹೆಚ್ಚಿನ ಅನುಕೂಲಕ್ಕೆ ಆಸ್ಪತ್ರೆ ನಿರ್ಮಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಗುರುವಾರ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಎಂ.ಸಿ.ಬಡಾವಣೆಯಲ್ಲಿ ನಿರ್ಮಿಸಿರುವ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಈ ಆಸ್ಪತ್ರೆಯನ್ನು ಬಾಲಗಂಗಾಧರನಾಥ ಸ್ವಾಮೀಜಿಯವರಿಗೆ ಸಮರ್ಪಣೆ ಮಾಡಲಾಗಿದೆ. ಇಂದು ಬೆಂಗಳೂರು ನಗರ ಡೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಜನಸಂಖ್ಯೆ ಮತ್ತು ವಾಹನ ಸಂಖ್ಯೆ ಏರುತ್ತಿದೆ. ಅನಿವಾರ್ಯ ಮತ್ತು ಸವಾಲಿನ ನಡುವೆ ನಗರವನ್ನು ಅಭಿವೃದ್ಧಿ ಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಬೆಂಗಳೂರಿನ ಅಭಿವೃದ್ಧಿಗಾಗಿ ನಗರೋತ್ಥನ ಅನುದಾನವನ್ನು ನೀಡಲಾಗಿದೆ. ಪ್ರವಾಹ ಸಮಸ್ಯೆ ನಿವಾರಣೆಗಾಗಿ 1800 ಕೋಟಿ ನೀಡಲಾಗಿದ್ದು, ನಗರದ ಮೂಲಭೂತ ಸಮಸ್ಯೆ ನಿವಾರಣೆಗಾಗಿ ಮತ್ತು 75 ಸ್ಲಂ ಪ್ರದೇಶ, 75 ಕೆರೆ ಉಳಿಸಲು ಅಮೃತ ಯೋಜನೆಯಿಂದ ವಿವಿಧ ಅನುದಾನಗಳನ್ನು ನೀಡಲಾಗಿದೆ. ಬ್ರಾಂಡ್ ಬೆಂಗಳೂರನ್ನು ಉಳಿಸಲು ಎಲ್ಲ ರೀತಿಯ ಶ್ರಮ ವಹಿಸಲಾಗುತ್ತಿದ್ದು, ಅಂತರಾಷ್ಟಿಯ ಮಟ್ಟದಲ್ಲಿ ಬೆಂಗಳೂರು ನಗರ ಕೀರ್ತಿ ಬರುವಂತೆ ಮಾಡಲಾಗುವುದು ಎಂದು ತಿಳಿಸಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮಿ ಮಾತನಾಡಿ, ಯಾವ ದೇಶದಲ್ಲಿ ಆರೋಗ್ಯವಂತ ಜನರು ಹೆಚ್ಚಿರುತ್ತಾರೋ ಆ ದೇಶ ಸದೃಢವಾಗಿರುತ್ತದೆ. ಬಡ ಜನರಿಗೆ ಉಚಿತ ಆರೋಗ್ಯ ಸೇವೆಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಜನರ ಸೇವೆ ಆರಂಭವಾಗಿದೆ. ಗುರುಗಳ ಸೇವೆ, ನೊಂದವರ ಪರ ಸೇವೆ ಮತ್ತು ವಿನೀತರಾಗಿ ಇರುವವರಿಗೆ ಹೆಚ್ಚಿನ ಆಯಸ್ಸು, ಆರೋಗ್ಯ ಲಭಿಸುತ್ತದೆ ಎಂದು ಹೇಳಿದರು.
ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಎಲ್ಲರಿಗೂ ಆರೋಗ್ಯ ಬೇಕು, ಆರೋಗ್ಯವೆ ಭಾಗ್ಯ ಮತ್ತು ಆನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ಬಂದಾಗ ಉತ್ತಮ ವೈದ್ಯಕೀಯ ಸೌಲಭ್ಯವಿದೆ. ಉತ್ತಮ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಹೊರಬನ್ನಿ ಎಂದು ಆಶೀರ್ವಾದ ಮಾಡಬಹುದುಮ ಎಂದು ತಿಳಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಬಾಲಗಂಗಾಧರನಾಥ ಸ್ವಾಮಿ ಒಂದೇ ಸೂರಿನಲ್ಲಿ ಎಲ್ಲ ವೈದ್ಯಕೀಯ ಸೌಲಭ್ಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಿಗಲಿದೆ. ಒತ್ತಡದ ಜೀವನದಿಂದ ಅನಾರೋಗ್ಯ ಪೀಡಿತರಾಗವುದು ಸಾಮಾನ್ಯವಾಗಿದೆ. ಅವರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಸಿಗಬೇಕೆಂಬುದು ಸರಕಾರ ಉದ್ದೇಶ. ಆ ನಿಟ್ಟಿನಲ್ಲಿ ಕೆಲಸ ಮಾಡಿದೆ ಎಂದರು.
ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರದ ನೂರು ವರ್ಷದ ಇತಿಹಾಸವಿರುವ ಮಹಾನಗರ ಪಾಲಿಕೆಗೆ ಇದು ಪ್ರಪ್ರಥಮ ಆಸ್ಪತ್ರೆಯಾಗಿದೆ ಎಂದ ಅವರು, ಪಂತರಪಾಳ್ಯದಲ್ಲಿ 200ಹಾಸಿಗೆ ಸಾಮಥ್ರ್ಯದ ಹೈಟೆಕ್ ಆಸ್ಪತ್ರೆಯನ್ನು ಕರ್ನಾಟಕ ರತ್ನ ನಟ ಪುನೀತ್ ರಾಜ್ ಕುಮಾರ್ ಸ್ಮರಣೆಯಲ್ಲಿ ಮುಂದಿನ ತಿಂಗಳು ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದರು.
ಪಟ್ಟನಾಯಕನಹಳ್ಳಿಯ ಸ್ಫಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ ಮಾತನಾಡಿ, ಕೋವಿಡ್ ಸಾಂಕ್ರಮಿಕ ರೋಗದಿಂದ ಹಲವಾರು ಕುಟುಂಬದಲ್ಲಿ ಸಾವು, ನೋವು ಸಂಭವಿಸಿತು. ಇಂದು ಜನರಿಗೆ ಗುರುಗಳ ಆಶೀರ್ವಾದದಿಂದ ಉತ್ತಮ ಆಸ್ಪತ್ರೆ ನಿರ್ಮಿಸಲು ಕಾರಣವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ್, ವೈದ್ಯಕೀಯ ಸಚಿವ ಸುಧಾಕರ್, ಅಬಕಾರಿ ಸಚಿವ ಕೆ.ಗೋಪಾಲಯ್ಯ ಸೇರಿದಂತೆ ಮುಂತಾದವರು ಇದ್ದರು.










