ಉಕ್ರೇನ್ ಸಂಘರ್ಷ ಅಂತ್ಯಕ್ಕೆ ಒತ್ತು: ವಿಶ್ವಸಂಸ್ಥೆಯಲ್ಲಿ ಮುಂದಿನ ವಾರ ನಿರ್ಣಯ ಮಂಡನೆ

ವಿಶ್ವಸಂಸ್ಥೆ, ಫೆ.16: ರಶ್ಯವು ಉಕ್ರೇನ್ ವಿರುದ್ಧದ ಆಕ್ರಮಣ ಆರಂಭಿಸಿ ಒಂದು ವರ್ಷವಾಗಿರುವ ಸಂದರ್ಭದಲ್ಲಿ ಮುಂದಿನ ವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಿಶೇಷ ಅಧಿವೇಶನದಲ್ಲಿ ಉಕ್ರೇನ್ ಬಿಕ್ಕಟ್ಟಿಗೆ `ಸಾಧ್ಯವಾದಷ್ಟು ಬೇಗ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿಯನ್ನು ತಲುಪುವ ' ಅಗತ್ಯವನ್ನು ಒತ್ತಿಹೇಳುವ ಕರಡು ನಿರ್ಣಯವನ್ನು ಮಂಡಿಸಲಾಗುವುದು ಎಂದು ಮೂಲಗಳು ಹೇಳಿವೆ.
2022ರ ಫೆ.24ರಂದು ರಶ್ಯವು ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದೆ. ಈ ಸಂಘರ್ಷವು ಉಭಯ ದೇಶಗಳ ಮೇಲಷ್ಟೇ ಅಲ್ಲ, ಅಂತರಾಷ್ಟ್ರೀಯ ಸಮುದಾಯದ ಮೇಲೂ ವ್ಯಾಪಕ ಪರಿಣಾಮಕ್ಕೆ ಕಾರಣವಾಗಿದೆ. ಮುಂದಿನ ವಾರ ನಡೆಯಲಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ವಿಶೇಷ ಅಧಿವೇಶನದಲ್ಲಿ ಮೊದಲ 2 ದಿನ ಹಲವು ದೇಶಗಳ ಪ್ರತಿನಿಧಿಗಳು ಕರಡು ನಿರ್ಣಯದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಬಳಿಕ ಮುಂದಿನ ಗುರುವಾರ ಕರಡು ನಿರ್ಣಯವನ್ನು ಮತಕ್ಕೆ ಹಾಕಲಾಗುವುದು. ವಿಶ್ವಸಂಸ್ಥೆ ಸಾಮಾನ್ಯ ಸಭೆಯ 193 ಸದಸ್ಯರು ನಿರ್ಣಯದ ಬಗ್ಗೆ ತಮ್ಮ ಮತ ಚಲಾಯಿಸಲಿದ್ದಾರೆ. ರಶ್ಯ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಮತ್ತು ತಕ್ಷಣ ಯುದ್ಧವನ್ನು ಅಂತ್ಯಗೊಳಿಸಬೇಕು ಎಂದು ನಿರ್ಣಯದಲ್ಲಿ ಆಗ್ರಹಿಸಲಾಗಿದೆ.
ಈ ಅಧಿವೇಶನದಲ್ಲಿ ನಿರ್ಣಯದ ಪರ 75%ದಷ್ಟು ಸದಸ್ಯರು ಮತ ಚಲಾಯಿಸಿದರೆ ರಶ್ಯವನ್ನು ರಾಜತಾಂತ್ರಿಕವಾಗಿ ಒಬ್ಬಂಟಿಯಾಗಿಸಬಹುದು ಎಂದು ಉಕ್ರೇನ್ ಮತ್ತು ಅದರ ಮಿತ್ರಪಕ್ಷಗಳ ಆಶಯವಾಗಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯದ ಪರ ಅಭೂತಪೂರ್ವ ಬೆಂಬಲವನ್ನು ನಾವು ನಿರೀಕ್ಷಿಸುತ್ತಿದ್ದೇವೆ.
ಯಾಕೆಂದರೆ ಇಲ್ಲಿ ಅಪಾಯದಲ್ಲಿರುವುದು ಕೇವಲ ಉಕ್ರೇನ್ನ ಭವಿಷ್ಯವಲ್ಲ, ಪ್ರತೀ ದೇಶದ ಸ್ವಾತಂತ್ರ್ಯ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಗೌರವದ ಪ್ರಶ್ನೆಯಾಗಿದೆ ಎಂದು ಕರಡು ನಿರ್ಣಯ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುರೋಪಿಯನ್ ಯೂನಿಯನ್ನ ರಾಯಭಾರಿ ಒಲೋಫ್ ಸ್ಕೂಗ್ ಹೇಳಿದ್ದಾರೆ. ಕರಡು ನಿರ್ಣಯದ ಪ್ರತಿಯನ್ನು ಬುಧವಾರ ಸದಸ್ಯ ದೇಶಗಳಿಗೆ ರವಾನಿಸಲಾಗಿದೆ.
ಉಕ್ರೇನ್ ಬಿಕ್ಕಟ್ಟಿನ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕೈಗೊಳ್ಳುವ ಯಾವುದೇ ನಿರ್ಣಯವನ್ನು ರಶ್ಯವು ತನ್ನ ವೀಟೊ ಅಧಿಕಾರ ಬಳಸಿ ತಡೆಯುತ್ತಿರುವುದರಿಂದ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನ ಹೆಚ್ಚಿನ ಮಹತ್ವ ಪಡೆದಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯ ಕಾನೂನುಬದ್ಧವಾಗಿರುವುದಿಲ್ಲ, ಆದರೆ ರಾಜಕೀಯ ಮಹತ್ವವನ್ನು ಪಡೆದಿರುತ್ತದೆ.
ಕಳೆದ ವರ್ಷದ ಮಾರ್ಚ್ 2ರಂದು ನಡೆದಿದ್ದ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ರಶ್ಯದ ಆಕ್ರಮಣವನ್ನು ಖಂಡಿಸುವ ನಿರ್ಣಯದ ಪರ 141 ದೇಶಗಳು ಮತ ಚಲಾಯಿಸುವ ಮೂಲಕ ಉಕ್ರೇನ್ ಗೆ ನೈತಿಕ ಗೆಲುವು ಲಭಿಸಿತ್ತು. ರಶ್ಯವು ಉಕ್ರೇನ್ನ 4 ಪ್ರಾಂತಗಳನ್ನು ಸ್ವಾಧೀನಪಡಿಸಿಕೊಂಡಿರುವುದನ್ನು ಖಂಡಿಸುವ ನಿರ್ಣಯ ಅಕ್ಟೋಬರ್ 12ರಂದು ಮಂಡನೆಯಾದಾಗ 143 ದೇಶಗಳು ಬೆಂಬಲಿಸಿದ್ದವು. ಬಳಿಕ ಎಪ್ರಿಲ್ನಲ್ಲಿ ರಶ್ಯವನ್ನು ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯ ಸದಸ್ಯತ್ವದಿಂದ ಅಮಾನತುಗೊಳಿಸುವ ನಿರ್ಣಯ ಬಹುಮತದಿಂದ ಅಂಗೀಕಾರಗೊಂಡಾಗ ರಶ್ಯವು ನಿರ್ಣಯದ ಪರ ಮತ ಚಲಾಯಿಸಿದ ದೇಶಗಳೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಪುನರಾವಲೋಕಿಸುವ ಎಚ್ಚರಿಕೆ ನೀಡಿತ್ತು.
ಒಂದು ದೇಶವು ಮತ್ತೊಂದು ದೇಶದ ಮೇಲೆ ಆಕ್ರಮಣ ನಡೆಸಿದಾಗ ವಿಶ್ವಸಂಸ್ಥೆಯ ಸದಸ್ಯರಾಗಿ ನೀವು ತಟಸ್ಥರಾಗಿರಲು ಸಾಧ್ಯವಿಲ್ಲ. ಯಾಕೆಂದರೆ ಇದು ವಿಶ್ವಸಂಸ್ಥೆಯ ಮೂಲ ಆಶಯವಾದ `ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ'ವನ್ನು ಕಡೆಗಣಿಸುತ್ತದೆ ಎಂದು ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿ ಲಿಂಡಾ ಥಾಮಸ್-ಗ್ರೀನ್ಫೀಲ್ಡ್ ಹೇಳಿದ್ದಾರೆ.