`ಟೈಟಾನಿಕ್' ಹಡಗಿನ ಅವಶೇಷಗಳ ಅಪರೂಪದ ವೀಡಿಯೊ ಬಿಡುಗಡೆ

ನ್ಯೂಯಾರ್ಕ್, ಫೆ.16: ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ 1912ರಲ್ಲಿ ಮುಳುಗಡೆಯಾದ ಬೃಹತ್ ಹಡಗು ಟೈಟಾನಿಕ್ ನ ಅವಶೇಷಗಳ ಅಪರೂಪದ ವೀಡಿಯೊವನ್ನು ಬುಧವಾರ ಬಿಡುಗಡೆಗೊಳಿಸಲಾಗಿದೆ.
ಬ್ರಿಟನ್ ನ ಈ ಹಡಗಿನ ಅವಶೇಷಗಳು ಅಟ್ಲಾಂಟಿಕ್ ಮಹಾಸಾಗರದ ನೆಲದ ಮೇಲೆ, ಸಮುದ್ರದ ಮೇಲ್ಮೈಯಿಂದ ಸುಮಾರು 3 ಕಿ.ಮೀ ಆಳದಲ್ಲಿ ಬಿದ್ದಿರುವುದು ಈ ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಅಮೆರಿಕದ ವುಡ್ಸ್ಹೋಲ್ ಓಶಿಯಾನೊಗ್ರಾಫಿಕ್ ಇನ್ಸ್ಟಿಟ್ಯೂಷನ್((WHOI)ನ ತಂಡವು 1986ರಲ್ಲಿ ಈ ವೀಡಿಯೊವನ್ನು ಸೆರೆಹಿಡಿದಿದೆ ಎನ್ನಲಾಗಿದೆ.
1985ರ ಸೆಪ್ಟಂಬರ್ 1ರಂದು ಡಬ್ಲ್ಯುಎಚ್ಒಐ ಮತ್ತು ಫ್ರೆಂಚ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಶಿಯಾನೊಗ್ರಫಿಯ ತಂಡವು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ನೀರಿನಡಿಯ ಕ್ಯಾಮೆರಾ ಬಳಸಿ ಟೈಟಾನಿಕ್ ನ ಅವಶೇಷಗಳನ್ನು ಸಮುದ್ರದ ತಳಭಾಗದಲ್ಲಿ, 12,400 ಅಡಿಗಳಷ್ಟು ಕೆಳಗೆ ಪತ್ತೆಹಚ್ಚಲಾಗಿದೆ.
ಇದೀಗ ಜೇಮ್ಸ್ ಕ್ಯಾಮರೂನ್ ಅವರ ನಿರ್ದೇಶನದಲ್ಲಿ 1997ರಲ್ಲಿ ಬಿಡುಗಡೆಗೊಂಡಿದ್ದ ಟೈಟಾನಿಕ್ ಸಿನಿಮಾವನ್ನು ಮರುಬಿಡುಗಡೆಗೊಳಿಸುವ ಸಂದರ್ಭದಲ್ಲೇ ಟೈಟಾನಿಕ್ ನ ಅಪರೂಪದ ಅವಶೇಷಗಳನ್ನೂ ಬಿಡುಗಡೆಗೊಳಿಸಲಾಗುತ್ತಿದೆ.







