ಇಂದು ರಾಜ್ಯ ಬಜೆಟ್ ಮಂಡನೆ: ಭರಪೂರ ಭರವಸೆಗಳ ನಿರೀಕ್ಷೆ, ಹೊಸ ಯೋಜನೆಗಳ ಪ್ರಕಟ ಸಾಧ್ಯತೆ

ಬೆಂಗಳೂರು, ಫೆ. 16: ಮುಂದಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಮೇಲೆ ಕಣ್ಣಿಟ್ಟು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ (ಫೆ.17) 2023-24ನೆ ಸಾಲಿನ ಆಯವ್ಯಯ ಮಂಡನೆ ಮಾಡಲಿದ್ದು, ಅಗ್ಗದ ಹಾಗೂ ಜನಪ್ರಿಯ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.
ಶುಕ್ರವಾರ ಬೆಳಿಗ್ಗೆ 9.45ರ ಸುಮಾರಿಗೆ ಸಚಿವ ಸಂಪುಟ ಸಭೆಯಲ್ಲಿ ಪ್ರಸಕ್ತ ಸಾಲಿನ ಆಯವ್ಯಯಕ್ಕೆ ಅನುಮೋದನೆ ಪಡೆದ ಬಳಿಕ 10:15ರ ಸುಮಾರಿಗೆ ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಮಾಡಲಾಗುವುದು ಎಂದು ಸರಕಾರ ಪ್ರಕಟಿಸಿದ್ದು, ಬಜೆಟ್ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ. ಸಾರ್ವತ್ರಿಕ ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ರಾಜ್ಯದ ಜನರಿಗೆ ‘ಭರವಸೆಯ ರೂಪದ ಆಯವ್ಯಯ’ ಮಂಡನೆಯಾಗಲಿದೆ.
ಬಿಜೆಪಿ ಸರಕಾರದ ಕೊನೆಯ ಹಾಗೂ ವೈಯುಕ್ತಿಕವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ 2ನೆ ಬಜೆಟ್ ಮಂಡಿಸುತ್ತಿದ್ದು, ಇಂಧನ, ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ ಸೇರಿದಂತೆ ಬಡವರು, ರೈತರು, ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಕೇಂದ್ರವಾಗಿಟ್ಟುಕೊಂಡು ಹಲವು ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಹೆಚ್ಚಿಸಿದೆ.
ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಸಹಿತ ಸರಕಾರ ನೌಕರರ ಒಲೈಕೆಗೆ ಹಲವು ಯೋಜನೆಗಳನ್ನು ಘೋಷಿಸುವುದರ ಜೊತೆಗೆ ನೌಕರ ವರ್ಗದವರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಯೋಜನೆ ಪ್ರಕಟಿಸಲಿದ್ದಾರೆಂದು ಹೇಳಲಾಗುತ್ತಿದೆ. ಚುನಾವಣಾ ವರ್ಷವಾಗಿರುವುದರಿಂದ ಸರಕಾರ ನಾಲ್ಕು ತಿಂಗಳ ಕಾಲ ಲೇಖಾನುದಾನ ಪಡೆಯುವುದು ಸಂಪ್ರದಾಯ.
ಕಳೆದ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2 ಲಕ್ಷ 65 ಸಾವಿರದ 720 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದರು. ಈ ಬಾರಿಯ ಬಜೆಟ್ 3 ಲಕ್ಷ ಕೋಟಿ ಇರಲಿದೆ ಎಂದು ಅಂದಾಜಿಸಲಾಗಿದೆ. ಒಟ್ಟಿನಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಂಡಿಸುತ್ತಿರುವ ಈ ಬಜೆಟ್‍ನಲ್ಲಿ ಏನೆಲ್ಲಾ ಇರಲಿದೆ ಎಂಬುದು ಕುತೂಹಲ ಮೂಡಿಸಿದ್ದು, ನಾಳೆ ಎಲ್ಲವೂ ಜಗಜ್ಜಾಹೀರಾಗಲಿದೆ.







