ಅದಾನಿ ಸಮಸ್ಯೆಗಳು ಪ್ರಧಾನಿ ಮೋದಿಯನ್ನು ದುರ್ಬಲಗೊಳಿಸಲಿದೆ: ಖ್ಯಾತ ಉದ್ಯಮಿ ಜಾರ್ಜ್ ಸೊರೊಸ್
"ಭಾರತದಲ್ಲಿ ಪ್ರಜಾಪ್ರಭುತ್ವದ ಪುನರುತ್ಥಾನವನ್ನು ನಿರೀಕ್ಷಿಸುತ್ತೇನೆ"

ಹೊಸದಿಲ್ಲಿ: ಭಾರತದ ಖ್ಯಾತ ಉದ್ಯಮಿ ಹಾಗೂ ಅದಾನಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಗೌತಮ್ ಅದಾನಿ ಅವರ ಉದ್ಯಮ ಸಂಬಂಧಿ ಸಮಸ್ಯೆಗಳು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ದುರ್ಬಲಗೊಳಿಸಲಿದೆ ಹಾಗೂ ದೇಶದ ಪ್ರಜಾಪ್ರಭುತ್ವದ ಪುನರುತ್ಥಾನಕ್ಕೆ ಇದು ದಾರಿ ಮಾಡಿಕೊಡಲಿದೆ ಎಂದು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಹಂಗೇರಿಯನ್-ಅಮೆರಿಕನ್ ಉದ್ಯಮಿ 92 ವರ್ಷದ ಜಾರ್ಜ್ ಸೊರೊಸ್ ಹೇಳಿದ್ದಾರೆ.
ವಿದೇಶಿ ಹೂಡಿಕೆದಾರರ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸಬೇಕಾಗುವ ಜೊತೆಗೆ ಅದಾನಿ ಸಂಸ್ಥೆಗಳ ವಿರುದ್ಧದ ವಂಚನೆ ಮತ್ತು ಷೇರು ಮೌಲ್ಯ ತಿರುಚುವಿಕೆ ಆರೋಪಗಳ ಕುರಿತಂತೆ ಸಂಸತ್ತಿಗೆ ಉತ್ತರಿಸಬೇಕಾಗಿದೆ ಎಂದು ಗುರುವಾರ ತಮ್ಮ ಭಾಷಣವೊಂದರಲ್ಲಿ ಹೇಳಿದ ಸೊರೊಸ್, ಅದೇ ಸಮಯ, ಮೋದಿ ಈ ವಿಚಾರದ ಕುರಿತು ಇಲ್ಲಿಯ ತನಕ ಮೌನವಾಗಿರುವುದನ್ನು ಉಲ್ಲೇಖಿಸಿದ್ದಾರೆ.
ಮ್ಯುನಿಚ್ ಸೆಕ್ಯುರಿಟಿ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಸೊರೊಸ್, ʻʻಮೋದಿ ಮತ್ತು ಉದ್ಯಮಿ ಅದಾನಿ ಅವರು ನಿಕಟ ಮಿತ್ರರಾಗಿದ್ದಾರೆ ಹಾಗೂ ಇಬ್ಬರ ಭವಿಷ್ಯಗಳೂ ಒಂದಕ್ಕೊಂದು ಮಿಳಿತವಾಗಿವೆ" ಎಂದರು.
"ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಮಾರ್ಕೆಟ್‌ನಲ್ಲಿ ಹಣ ಸಂಗ್ರಹಿಸಲು ಮುಂದಾಗಿತ್ತು ಆದರೆ ವಿಫಲವಾಯಿತು. ಷೇರು ಮೌಲ್ಯ ತಿರುಚುವಿಕೆ ಆರೋಪ ಅದಾನಿ ಮೇಲಿದೆ ಹಾಗೂ ಅವರ ಕಂಪೆನಿಗಳ ಷೇರು ಮೌಲ್ಯ ದಿಢೀರ್ ಕುಸಿದವು. ಮೋದಿ ಈ ಕುರಿತು ಮೌನವಾಗಿದ್ದಾರೆ. ಆದರೆ ಅವರು ವಿದೇಶಿ ಹೂಡಿಕೆದಾರರು ಮತ್ತು ಸಂಸತ್ತಿಗೆ ಉತ್ತರಿಸಬೇಕು," ಎಂದರು.
"ಅದಾನಿಯ ಸಮಸ್ಯೆಗಳು, ಭಾರತ ಸರಕಾರದ ಮೇಲಿನ ಮೋದಿ ಹಿಡಿತವನ್ನು ಗಣನೀಯವಾಗಿ ಕಡಿಮೆಗೊಳಿಸಲಿದೆ ಹಾಗೂ ಅತ್ಯಂತ ಅಗತ್ಯವಿರುವ ಸಾಂಸ್ಥಿಕ ಸುಧಾರಣೆಗಳಿಗೆ ದಾರಿ ಮಾಡಿಕೊಡಲಿದೆ. ಭಾರತದಲ್ಲಿ ಪ್ರಜಾಪ್ರಭುತ್ವದ ಪುನರುತ್ಥಾನವನ್ನು ನಿರೀಕ್ಷಿಸುತ್ತೇನೆ," ಎಂದು ಅವರು ಹೇಳಿದರು.







