ವಿದೇಶಿ ಶಕ್ತಿಗಳಿಗೆ ಭಾರತೀಯರು ಒಗ್ಗಟ್ಟಾಗಿ ಪ್ರತಿಕ್ರಿಯಿಸಬೇಕು: ಜಾರ್ಜ್ ಸೊರೊಸ್ ವಿರುದ್ಧ ಸ್ಮೃತಿ ಇರಾನಿ ವಾಗ್ದಾಳಿ

ಹೊಸದಿಲ್ಲಿ: ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸುವ ವಿದೇಶಿ ಶಕ್ತಿಗಳಿಗೆ ಒಗ್ಗಟ್ಟಾಗಿ ಪ್ರತಿಕ್ರಿಯಿಸಬೇಕು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಕರೆ ನೀಡಿದ್ದಾರೆ.
ಭಾರತದ ಖ್ಯಾತ ಉದ್ಯಮಿ ಹಾಗೂ ಅದಾನಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಗೌತಮ್ ಅದಾನಿ ಅವರ ಉದ್ಯಮ ಸಂಬಂಧಿ ಸಮಸ್ಯೆಗಳು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ದುರ್ಬಲಗೊಳಿಸಲಿದೆ ಹಾಗೂ ದೇಶದ ಪ್ರಜಾಪ್ರಭುತ್ವದ ಪುನರುತ್ಥಾನಕ್ಕೆ ಇದು ದಾರಿ ಮಾಡಿಕೊಡಲಿದೆ ಎಂದು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಹಂಗೇರಿಯನ್-ಅಮೆರಿಕನ್ ಉದ್ಯಮಿ 92 ವರ್ಷದ ಜಾರ್ಜ್ ಸೊರೊಸ್ ಹೇಳಿದ್ದಾರೆ.
ಸೊರೊಸ್ ಅವರ ಹೇಳಿಕೆಯನ್ನು 'ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ನಾಶಪಡಿಸುವ ಘೋಷಣೆ' ಎಂದು ಕರೆದ ಅವರು, ನಮ್ಮ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದ ವಿದೇಶಿ ಶಕ್ತಿಗಳನ್ನು ಈ ಹಿಂದೆ ಭಾರತೀಯರು ಸೋಲಿಸಿದ್ದಾರೆ ಹಾಗೂ ಈಗ ಹಾಗೆಯೇ ಮಾಡುತ್ತಾರೆ. ಜಾರ್ಜ್ ಸೊರೊಸ್‌ಗೆ ತಕ್ಕ ಪ್ರತ್ಯುತ್ತರ ನೀಡುವಂತೆ ನಾನು ಪ್ರತಿಯೊಬ್ಬ ಭಾರತೀಯನನ್ನೂ ಕೋರುತ್ತೇನೆ" ಎಂದು ಹೇಳಿದರು.





