ಆಕಸ್ಮಿಕವಾಗಿ ಬಾವಿಗೆ ಬಿದ್ದ ಮಹಿಳೆಯನ್ನು ರಕ್ಷಿಸಿದ ಅಗ್ನಿಶಾಮಕ ದಳ

ಕುಂದಾಪುರ, ಫೆ.17: ಮನೆ ಸಮೀಪದ ಬಾವಿಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದ ಮಹಿಳೆಯೊಬ್ಬರನ್ನು ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ಶುಕ್ರವಾರ ತೆಕ್ಕಟ್ಟೆ ಸಮೀಪದ ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ.
ಇಲ್ಲಿನ ನಿವಾಸಿ ರತ್ನಾವತಿ ಶೆಟ್ಟಿ ಉಳ್ತೂರು (52) ಬಾವಿಗೆ ಬಿದ್ದು ರಕ್ಷಿಸಲ್ಪಟ್ಟವರು. ಇವರು ಬೆಳಗ್ಗೆ ಬಾವಿಯಿಂದ ನೀರೆತ್ತುವಾಗ ಆಕಸ್ಮಿಕ ಕಾಲು ಜಾರಿ 20 ಅಡಿ ಆಳದ ಬಾವಿಗೆ ಬಿದ್ದಿದ್ದಾರೆ. ತಕ್ಷಣ ಮನೆಯವರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ನಾಗರಾಜ್ ಪೂಜಾರಿ ಬಾವಿಗೆ ಇಳಿದು, ಮಹಿಳೆಯನ್ನು ರಕ್ಷಿಸಿದ್ದಾರೆ. ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಕುಂದಾಪುರ ಅಗ್ನಿಶಾಮಕ ದಳ ಠಾಣಾಧಿಕಾರಿ ಬಾಬು ಶೆಟ್ಟಿ, ಪ್ರಮುಖ ಅಗ್ನಿಶಾಮಕ ರವೀಂದ್ರ ದೇವಾಡಿಗ, ಸಿಬ್ಬಂದಿಯಾದ ಆಸಿಫ್, ಸಂತೋಷ ಶೆಟ್ಟಿ, ಅಗ್ನಿಶಾಮಕ ವಾಹನ ಚಾಲಕ ಮುಸ್ತಫ, ಸ್ಥಳೀಯರು ಸಹಕರಿಸಿದ್ದರು.
.jpeg)
.jpeg)
.jpeg)