ಅಂಬೇಡ್ಕರ್ ಕುರಿತ ವಿವಾದಿತ ನಾಟಕ ಎಂಸಿಸಿ ಫೆಸ್ಟ್‌ನಲ್ಲೂ ಪ್ರದರ್ಶನಗೊಂಡು ಮೊದಲ ಸ್ಥಾನ ಪಡೆದಿತ್ತು: ವರದಿ

ಬೆಂಗಳೂರು: ಡಾ. ಬಿ. ಆರ್ ಅಂಬೇಡ್ಕರ್ ಮತ್ತು ದಲಿತ ಸಮುದಾಯವನ್ನು ಕೆಟ್ಟ ದೃಷ್ಟಿಯಲ್ಲಿ ಬಿಂಬಿಸಿದೆಯೆಂದು ಆರೋಪಿಸಲಾದ ವಿವಾದಿತ ಮ್ಯಾಡ್‌ಆಡ್ಸ್ ನಾಟಕವನ್ನು ಎಂಸಿಸಿ ಫೆಸ್ಟ್ ʻಕಲ್-ಆಹ್ʼನಲ್ಲೂ ಪ್ರದರ್ಶಿಸಲಾಗಿತ್ತು ಎಂದು ಮೌಂಟ್ ಕಾರ್ಮೆಲ್ ಕಾಲೇಜು (ಎಂಸಿಸಿ) ಮೂಲಗಳು ತಿಳಿಸಿವೆ. ಈ ನಾಟಕ ಪ್ರದರ್ಶಿಸಿದ್ದ ಜೈನ್ ಯುನಿವರ್ಸಿಟಿ ಸಿಎಂಎಸ್ ಇದರ ಡೆಲ್ರಾಯ್ಸ್ ಬಾಯ್ಸ್ ಈ ನಾಟಕಕ್ಕೆ ಪ್ರಥಮ ಸ್ಥಾನ ಪಡೆದಿತ್ತು ಎಂದು indianexpress.com ವರದಿ ಮಾಡಿದೆ.
ಮ್ಯಾಡ್‌ಆಡ್ಸ್ ಸ್ಪರ್ಧೆಯನ್ನು ಫೆಬ್ರವರಿ 4 ರಂದು ಎಂಸಿಸಿಯ ವಿದ್ಯಾರ್ಥಿ ಸಂಘಟನೆ ಅಂಡರ್ 25 ಆಯೋಜಿಸಿತ್ತು. ಈ ಸ್ಪರ್ಧೆಯಲ್ಲೂ ಜೈನ್ ವಿವಿ ಸಿಎಂಎಸ್ ನ ಡೆಲ್ರಾಯ್ಸ್ ಬಾಯ್ಸ್ ಈ ನಾಟಕ ಪ್ರದರ್ಶಿಸಿತ್ತು.
ಅದನ್ನು ಅನರ್ಹಗೊಳಿಸುವ ಯತ್ನಗಳ ಹೊರತಾಗಿಯೂ ನಾಟಕ ಮೊದಲ ಸ್ಥಾನ ಪಡೆದಿತ್ತು. ಅಷ್ಟೇ ಅಲ್ಲದೆ ಇನ್ನೂ ಎರಡು ಇತರ ಫೆಸ್ಟ್‌ಗಳಲ್ಲಿ ಈ ನಾಟಕ ಪ್ರದರ್ಶಿಸಲಾಗಿತ್ತು ಎಂದು ಸಿಎಂಎಸ್ ಅಧಿಕಾರಿಯೊಬ್ಬರೂ ಹೇಳಿದ್ದರು.
ಅಂಡರ್25 ನ ಇನ್‌ಸ್ಟಾಗ್ರಾಂ ಪುಟದ ಪ್ರಕಾರ ಮ್ಯಾಡ್‌ಆಡ್ಸ್ ಸ್ಪರ್ಧೆಯ ತೀರ್ಪುಗಾರರಲ್ಲಿ ಸೈಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್ ಇದರ ಆಡಳಿತ ಮಂಡಳಿಯ ಮಾಜಿ ಉಪಾಧ್ಯಕ್ಷೆ ರೆಬೆಕ್ಕಾ ಫ್ಲೋರೆನ್ಸ್, ಬಾಲ್ಡ್ವಿನ್ ಮೆಥಾಡಿಸ್ಟ್ ಕಾಲೇಜಿನ ಮಾಜಿ ವಿದ್ಯಾರ್ಥಿ ಕೌನ್ಸಿಲ್ ಅಧ್ಯಕ್ಷ ನಿಸ್ ಜಿಯೋ ಮತ್ತು ಡೆಲ್ರಾಯ್ಸ್ ಬಾಯ್ಸ್ ಗ್ರೂಪ್ ಇದರಲ್ಲಿ ಈ ಹಿಂದೆ ಇದ್ದ ಹರ್ಷಿಲ್ ಜೆ ಶಾ ಇದ್ದರು.
ಆದರೆ ಈ ನಾಟಕವನ್ನು ಎಂಸಿಸಿ ಶಿಕ್ಷಕರ ಮುಂದೆ ಪ್ರದರ್ಶಿಸಲಾಗಿತ್ತೇ ಎಂಬುದು ತಿಳಿದಿಲ್ಲ. ಈ ನಾಟಕದ ಪ್ರದರ್ಶಕರನ್ನು ಅನರ್ಹಗೊಳಿಸುವಂತೆ ಅಂಡರ್25 ತೀರ್ಪುಗಾರರ ಬಳಿ ಕೇಳಿದಾಗ ಈ ನಾಟಕ ʼಡಾರ್ಕ್ ಹ್ಯೂಮರ್ʼ ಆಗಿದೆ ಹಾಗೂ ಅದರಲ್ಲಿ ತಪ್ಪೇನಿಲ್ಲ ಎಂದಿದ್ದರೆಂದು ಹೇಳಲಾಗಿದೆ. ಆದರೆ ನಾಟಕವನ್ನು ವಿರೋಧಿಸಿ ಸಂಸ್ಥೆಯನ್ನು ಕೆಲ ಸದಸ್ಯರು ತೊರೆದಿದ್ದರೆಂದು ಹೇಳಲಾಗಿದೆ.
ಈ ನಾಟಕ ಪ್ರದರ್ಶನದ ಹಿಂದೆ ಮೌಂಟ್ ಕಾರ್ಮೆಲ್ ಕಾಲೇಜು ಪಾತ್ರವಿದೆಯೇ ಎಂಬ ಬಗ್ಗೆ ಪೊಲೀಸರೂ ಪ್ರತಿಕ್ರಿಯಿಸಿಲ್ಲ.
ಈ ಸಂಬಂಧ ಸೋಮವಾರ ಬಂಧಿತರಾಗಿರುವ ಜೈನ್ ಯುನಿವರ್ಸಿಟಿ ಪ್ರಾಂಶುಪಾಲ ಡಾ ದಿನೇಶ್ ನೀಲಕಂಠ, ವಿದ್ಯಾರ್ಥಿಗಳು ಹಾಗೂ ಯುವಜನೋತ್ಸವ ಆಯೋಜಕರ ಸಹಿತ ಒಂಬತ್ತು ಮಂದಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.







