ಹನೂರು: ಕಾವೇರಿ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಗಡಿ ಭಾಗದ ಕಾವೇರಿ ನದಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿರುವುದು ವರದಿಯಾಗಿದೆ.
ಕಾವೇರಿ ವನ್ಯಧಾಮದ ಗೋಪಿನಾಥಂ ವಲಯದ ಅಡಿಪಾಲರ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ತಮಿಳುನಾಡಿನ ನಾಲ್ವರು ಬೇಟೆಗಾರರು ಜಿಂಕೆ ಬೇಟೆಯಾಡುತ್ತಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆನ್ನಲಾಗಿದೆ.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಒಂದು ನಾಡ ಬಂದೂಕು ಹಾಗೂ ತೆಪ್ಪದಲ್ಲೇ ಎಲ್ಲ ಪರಿಕರಳಗನ್ನು ಬಿಟ್ಟು ಬೇಟೆಗಾರರು ಪರಾರಿಯಾಗಿದ್ದರು.
ಕಾವೇರಿ ನದಿಯ ತಮಿಳುನಾಡು ಭಾಗದಲ್ಲಿ ಮೃತದೇಹ ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ತಮಿಳುನಾಡಿನ ಗೋವಿಂದಪಾಡಿಯ ರಾಜ ಎಂದು ಗುರುತಿಸಲಾಗಿದೆ.
'ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದಾನೆಯೇ ಅಥವಾ ನದಿ ದಾಟುವ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆಯೇ ಎಂಬುದು ಸ್ಪಷ್ಟವಾಗಿಲ್ಲ. ಮಾಹಿತಿ ಕಲೆ ಹಾಕಲಾಗುತ್ತಿದೆ' ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.