ಮಾರ್ಚ್ 31ರಿಂದ 16ನೇ ಆವೃತ್ತಿಯ ಐಪಿಎಲ್ ಆರಂಭ

ಮುಂಬೈ, ಫೆ.17: ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಯು(IPL 2023) ಮಾರ್ಚ್ 31ರಿಂದ ಆರಂಭವಾಗಲಿದ್ದು, ಅಹಮದಾಬಾದ್‌ನಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ ಎಂದು ಬಿಸಿಸಿಐ ಶುಕ್ರವಾರ ಪ್ರಕಟಿಸಿದೆ.
ಮೊದಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಮುಕ್ತಾಯವಾಗಿ 5 ದಿನಗಳ ನಂತರ ಪುರುಷರ ಐಪಿಎಲ್ ಮಾ.26ರಿಂದ ಆರಂಭವಾಗಲಿದೆ. ಮೇ 28ರಂದು ಅಹಮದಾಬಾದ್‌ನಲ್ಲಿ ಫೈನಲ್ ಪಂದ್ಯ ನಿಗದಿಯಾಗಿದೆ.
2019ರಲ್ಲಿ ಕೊನೆಯ ಬಾರಿ ದೇಶದ ಎಲ್ಲ ಸಾಂಪ್ರದಾಯಿಕ ತಾಣಗಳಲ್ಲಿ ಲೀಗ್ ನಡೆದಿತ್ತು. ಈ ವರ್ಷ ಎಲ್ಲ 12 ತಾಣಗಳಲ್ಲಿ 52 ದಿನಗಳ ಕಾಲ ಒಟ್ಟು 70 ಲೀಗ್ ಪಂದ್ಯಗಳು ನಡೆಯಲಿವೆ.
2020ರಲ್ಲಿ ಟೂರ್ನಿಯು ಸೆಪ್ಟಂಬರ್-ನವೆಂಬರ್‌ಗೆ ಮುಂದೂಡಿಕೆಯಾಗಿತ್ತು. ಕೋವಿಡ್-19 ಕಾರಣಕ್ಕೆ ಯುಎಇನಲ್ಲಿ ನಡೆದಿತ್ತು. 2021ರಲ್ಲಿ ಟೂರ್ನಿಯನ್ನು ಭಾರತದಲ್ಲಿ ನಡೆಸಲು ಪ್ರಯತ್ನಿಸಲಾಗಿತ್ತು. ಆದರೆ ಟೂರ್ನಿಯ ದ್ವಿತೀಯಾರ್ಧವು ಸೆಪ್ಟಂಬರ್‌ನಲ್ಲಿ ಯುಎಇನಲ್ಲಿ ನಡೆದಿತ್ತು.
2022ರಲ್ಲಿ ಟೂರ್ನಿಯು ಮಾರ್ಚ್-ಮೇನಲ್ಲಿ ನಡೆದಿತ್ತ್ತು. ಆದರೆ ಇಡೀ ಲೀಗ್ ಹಂತದ ಪಂದ್ಯಗಳು ಮುಂಬೈ, ಪುಣೆಯಲ್ಲಿ ನಡೆದಿತ್ತು . ಪ್ಲೇ ಆಫ್ ಹಾಗೂ ಫೈನಲ್ ಕೋಲ್ಕತಾ ಹಾಗೂ ಅಹಮದಾಬಾದ್‌ನಲ್ಲಿ ನಡೆದಿದ್ದವು.