ಡಾ.ಎಂ. ಸುಧಾಕರ್ ಶೆಟ್ಟಿ ಸ್ಮರಣಾರ್ಥ 40ನೇ ಮಂಗಳೂರು ಆರ್ಥಪೆಡಿಕ್ ಕೋರ್ಸ್ ಗೆ ಚಾಲನೆ

ಕೊಣಾಜೆ: ಕೆನರಾ ಆರ್ಥಪೆಡಿಕ್ ಸೊಸೈಟಿ ಹಾಗೂ ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 12ನೇ ವರ್ಷದ ಡಾ.ಎಂ. ಸುಧಾಕರ್ ಶೆಟ್ಟಿ ಸ್ಮರಣಾರ್ಥ 40ನೇ ಮಂಗಳೂರು ಆರ್ಥಪೆಡಿಕ್ ಕೋರ್ಸ್ ಉದ್ಘಾಟನಾ ಸಮಾರಂಭವು ದೇರಳಕಟ್ಟೆ ಎ.ಬಿ ಶೆಟ್ಟಿ ದಂತ ಮಹಾವಿದ್ಯಾಲಯದ ಆವಿಷ್ಕಾರ್ ಸಭಾಂಗಣದಲ್ಲಿ ನಡೆಯಿತು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಾಧಿಪತಿ ಡಾ. ಎಂ.ಶಾಂತಾರಾಮ್ ಶೆಟ್ಟಿ ಮಾತನಾಡಿ, ಆರ್ಥಪೆಡಿಕ್ ಕ್ಷೇತ್ರದಲ್ಲಿ ಜೈವಿಕ ತಂತ್ರಜ್ಞಾನದ ಅನ್ವೇಷಣೆಗಳು ಪರಿಣಾಮಕಾರಿಯಾಗಿ ಆಗಿದ್ದು, ಶಸ್ತ್ರಚಿಕಿತ್ಸಕರ ಕೊಡುಗೆಯೂ ಕ್ಷೇತ್ರದಲ್ಲಿ ಅಪಾರವಾಗಿರುವುದರಿಂದ ರೋಗಿಗಳಿಗೆ ಉತ್ತಮ ಸೇವೆಯನ್ನು ಒದಗಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಆರ್ಥಪೆಡಿಕ್ ಕ್ಷೇತ್ರದಲ್ಲೇ ಮೊದಲ ಬಾರಿಗೆ ಮಂಗಳೂರು ಆರ್ಥಪೆಡಿಕ್ ತರಬೇತಿಯನ್ನು ಆರಂಭಿಸಲಾಯಿತು. ಇದೀಗ ಕ್ಷೇತ್ರ ಬಹಳಷ್ಟು ಮುಂದುವರಿದು ದೇಶ ವಿದೇಶಗಳಲ್ಲೂ ಸಮನಾಂತರ ತರಬೇತಿಗಳು ನಡೆಯುತ್ತಿವೆ. ತರಬೇತಿ ಕಾರ್ಯಗಾರಗಳಿಂದ ಪರಸ್ಪರ ಜ್ಞಾನ ವಿನಿಮಯದ ಜೊತೆಗೆ ಎಲ್ಲರಲ್ಲೂ ಜ್ಞಾನ ವೃದ್ಧಿಸಲು ಸಾಧ್ಯವಾಗಿದೆ ಎಂದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಉದ್ಘಾಟಿಸಿದರು. ಉಪಕುಲಪತಿ ಡಾ. ಎಂ.ಎಸ್ ಮೂಡಿತ್ತಾಯ, ಕ್ಷೇಮ ಡೀನ್ ಡಾ.ಪಿ.ಯಸ್ ಪ್ರಕಾಶ್, ಕರ್ನಾಟಕ ಆರ್ಥಪಡಿಕ್ ಅಸೋಸಿಯೇಷನ್ನಿನ ಅಧ್ಯಕ್ಷ ಡಾ. ಎಡ್ವರ್ಡ್ ನಝರೆತ್, ಡಾ.ಲತೀಶ್ ಲಿಯೋ ಉಪಸ್ಥಿತರಿದ್ದರು.
ಕ್ಷೇಮ ಆರ್ಥಪೆಡಿಕ್ಸ್ ವಿಭಾಗ ಮುಖ್ಯಸ್ಥ ಡಾ.ವಿಕ್ರಮ್ ಶೆಟ್ಟಿ ಸ್ವಾಗತಿಸಿದರು. ಡಾ.ಸಿದ್ದಾರ್ಥ್ ಶೆಟ್ಟಿ ನಿರೂಪಿಸಿದರು. ಡಾ. ಸಚ್ಚಿದಾನಂದ ರೈ ವಂದಿಸಿದರು.