ರಾಜ್ಯ ಬಜೆಟ್ 2023 | ರೈತರು, ಬಡವರು, ಮಹಿಳೆಯರಿಗೆ ಭರಪೂರ ಯೋಜನೆಗಳ ಘೋಷಣೆ

- ಸರಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ
- ರೈತರಿಗೆ 5ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ
- ವಿದ್ಯಾರ್ಥಿನಿಯರು-ದುಡಿಯುವ ಮಹಿಳೆಯರಿಗೆ ‘ಉಚಿತ ಬಸ್ ಪಾಸ್’
-ನಿರುದ್ಯೋಗಿಗಳಿಗೆ 2ಸಾವಿರ ರೂ.ನೆರವು
ಬೆಂಗಳೂರು, ಫೆ. 17: ‘ರೈತರಿಗೆ ಬಡ್ಡಿರಹಿತ ಸಾಲ 5ಲಕ್ಷ ರೂ.ಗಳಿಗೆ ಹೆಚ್ಚಳ, ಮಹಿಳೆಯರಿಗೆ ಮಾಸಿಕ 500 ರೂ.ನೆರವು ನೀಡುವ ‘ಗೃಹಿಣಿ ಶಕ್ತಿ’, ವಿದ್ಯಾರ್ಥಿನಿಯರು-ದುಡಿಯುವ ಮಹಿಳೆಯರಿಗೆ ಉಚಿತ ಬಸ್‍ಪಾಸ್, ಅಸಂಘಟಿತ ವಲಯ ಕಾರ್ಮಿಕರಿಗೆ ‘ಸಿಎಂ ವಿಮೆ’, ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿಯ ‘ಸಿಎಂ ವಿದ್ಯಾಶಕ್ತಿ’, ಟ್ಯಾಕ್ಸಿ, ರಿಕ್ಷಾ ಚಾಲಕರ ಮಕ್ಕಳಿಗೂ ‘ವಿದ್ಯಾಸಿರಿ’ ವಿಸ್ತರಣೆ ಸೇರಿದಂತೆ ಭರಪೂರ ಯೋಜನೆಗಳ ಘೋಷಣೆಯೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 2023-24ನೆ ಸಾಲಿನ ಆಯವ್ಯಯ ಮಂಡನೆ ಮಾಡಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಬಸವರಾಜ ಬೊಮ್ಮಾಯಿ, ಒಟ್ಟಾರೆ 3,09,182 ಕೋಟಿ ರೂ.ಗಳಷ್ಟು ದಾಖಲೆ ಮೊತ್ತದ ಆಯವ್ಯಯ ಮಂಡಿಸಿದರು. ಮುಂಬರಲಿರುವ ಸಾರ್ವತ್ರಿಕ ಚುನಾವಣೆಯ ಮೇಲೆ ದೃಷ್ಟಿನೆಟ್ಟು ರೈತರು, ಬಡವರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ ಜನರಿಗೆ ಭರಪೂರ ಕೊಡುಗೆಗಳನ್ನು ಪ್ರಕಟಿಸಿದರು.
ರೈತರಿಗೆ ‘ಭೂ ಸಿರಿ' ಹೊಸ ಯೋಜನೆ ಘೋಷಿಸಿದ್ದು, ಕೃಷಿಕರಿಗೆ 10 ಸಾವಿರ ರೂ.ಹೆಚ್ಚುವರಿ ಸಹಾಯಧನ. ‘ರೈತ ಸಿರಿ' ಯೋಜನೆಯಡಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ ಗೆ 10ಸಾವಿರ ರೂ. ಪ್ರೋತ್ಸಾಹ ಧನ, ‘ವಿದ್ಯಾವಾಹಿನಿ' ಯೋಜನೆಯಡಿ ವಿದ್ಯಾರ್ಥಿನಿಯರಿಗೆ 350 ಕೋಟಿ ರೂ.ವೆಚ್ಚದಲ್ಲಿ ‘ಉಚಿತ ಬಸ್ ಪಾಸ್’ ಸೌಲಭ್ಯ ನೀಡಲಾಗುವುದು ಎಂದು ಮುಖ್ಯಮಂತ್ರಿ ಘೋಷಣೆ ಮಾಡಿದರು.
‘ಮಹಿಳೆಯರಿಗೆ ‘ಗೃಹಿಣಿ ಶಕ್ತಿ' ಯೋಜನೆಯಡಿ ಮಾಸಿಕ 500 ರೂ.ನೆರವು ನೀಡಲು ಒಟ್ಟು 46,278 ಕೋಟಿ ರೂ.ಅನುದಾನ ಒದಗಿಸಿದ್ದು, ‘ನಮ್ಮ ನೆಲೆ' ಯೋಜನೆಯಡಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ನಿವೇಶನ, ‘ಸಹ್ಯಾದ್ರಿ ಸಿರಿ' ಯೋಜನೆ ಅಡಿ ಕರಾವಳಿ, ಮಲೆನಾಡು ಹಾಗೂ ಅರೆ ಮಲೆನಾಡಿನಲ್ಲಿ ನೀರು ಸಂರಕ್ಷಣೆಗೆ ಹಾಗೂ ತೋಟಗಾರಿಕೆ ಉತ್ಪಾದಕತೆ ಹೆಚ್ಚಿಸಲು ‘ಒಂದು ತೋಟ ಒಂದು ಬೆಳೆ' ಯೋಜನೆಗೆ 10 ಕೋಟಿ ರೂ.ಮೀಸಲಿಡಲಾಗುವುದು’ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಯುವಜನರಿಗೆ ಬದುಕುವ ದಾರಿ: ‘ಆಳ ಸಮುದ್ರ ಮೀನುಗಾರಿಕೆ ಉತ್ತೇಜನಕ್ಕೆ 'ಮತ್ಸ್ಯ ಸಿರಿ' ಯೋಜನೆ ಜಾರಿ, ‘ಮುಖ್ಯಮಂತ್ರಿ ವಿದ್ಯಾ ಶಕ್ತಿ' ಯೋಜನೆಯಡಿ ಪದವಿ ವರೆಗೂ ರಾಜ್ಯದ ಎಲ್ಲ ಸರಕಾರಿ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ‘ಸಹಸ್ರ ಸರೋವರ' ಯೋಜನೆಯಡಿ ರಾಜ್ಯದ 1ಸಾವಿರ ಸಣ್ಣ ಸರೋವರಗಳನ್ನು ಅಭಿವೃದ್ಧಿ, ‘ಬದುಕುವ ದಾರಿ' ಯೋಜನೆಯಡಿ ಯುವಜನರಿಗೆ 3ತಿಂಗಳು ಐಟಿಐ ತರಬೇತಿ, ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ‘ಯುವಸ್ನೇಹಿ' ಯೋಜನೆಯಡಿ 2 ಸಾವಿರ ರೂ.ನೀಡಲಾಗುವುದು’ ಎಂದು ಅವರು ಘೋಷಣೆ ಮಾಡಿದರು.
‘ಸರಕಾರಿ ಪದವಿಪೂರ್ವ ಮತ್ತು ಸರಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ. ಹಳ್ಳಿ ಮುತ್ತು ಯೋಜನೆಯಡಿ ಗ್ರಾಮೀಣ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿ, ಸಿಇಟಿ ಮೂಲಕ ಸರಕಾರಿ ಕೋಟಾದಲ್ಲಿ ಆಯ್ಕೆಯಾಗುವ 500 ವಿದ್ಯಾರ್ಥಿಗಳ ಸಂಪೂರ್ಣ ಶುಲ್ಕ ಭರಿಸಲು ಕ್ರಮ ವಹಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಘೋಷಿಸಿದರು.
‘ಮನೆ ಮನೆಗೆ ಆರೋಗ್ಯ ಕಾರ್ಯಕ್ರಮದಡಿ ಗ್ರಾಮೀಣ ಜನತೆಯ ಸಮಗ್ರ ಆರೋಗ್ಯ ತಪಾಸಣೆ, ಆರೋಗ್ಯ ಸೇವೆಗಳ ಡಿಜಿಟಲೀಕರಣ. ರೋಗಿಗಳ ಆರೋಗ್ಯ ದಾಖಲೆಗಳ ಸುರಕ್ಷಿತ ಕ್ರೋಡೀಕರಣಕ್ಕೆ ಕ್ರಮ, ರಾಯಚೂರಿನಲ್ಲಿ ಏಮ್ಸ್ ಮಾದರಿಯ ಆಸ್ಪತ್ರೆ ಹಾಗೂ ಕುಮಟಾದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
‘ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ನಿವೃತ್ತಿ ಉಪಧನಕ್ಕಾಗಿ 40 ಕೋಟಿ ರೂ. ಅನುದಾನ, ಕಾರ್ಯಕರ್ತೆಯರು, ಸಹಾಯಕಿಯರು, ಬಿಸಿಯೂಟ ತಯಾರಕಿಯರು, ಆಶಾ ಕಾರ್ಯಕರ್ತೆಯರ ಗೌರವ ಧನ 1ಸಾವಿರ ರೂ.ಹೆಚ್ಚಳ, ನಮ್ಮ ಜಿಲ್ಲೆ ನಮ್ಮ ಸಂಸ್ಕøತಿ ಕಾರ್ಯಕ್ರಮದಡಿ ಪ್ರತಿ ಜಿಲ್ಲೆಯಲ್ಲಿ ಜಾನಪದ ಹಬ್ಬ ಆಯೋಜನೆ ಮಾಡಲಾಗುವುದು, 100 ಕೋಟಿ ರೂ.ವೆಚ್ಚದಲ್ಲಿ ಶಾಲೆಗೆ ತೆರಳಲು ‘ಮಕ್ಕಳ ಬಸ್' ಯೋಜನೆ ರೂಪಿಸಲಾಗುವುದು ಎಂದು ಅವರು ಘೋಷಣೆ ಮಾಡಿದರು.
‘ಜಲನಿಧಿ' ಯೋಜನೆಯಡಿ ರೈತರ ಜಮೀನುಗಳಲ್ಲಿ ಜಲ ಹೊಂಡ, ಗೋ ಶಾಲೆಗಳ ನಿರ್ಮಾಣಕ್ಕೆ ‘ಪುಣ್ಯ ಕೋಟಿ ದತ್ತು ಯೋಜನೆ' ಹಣಕಾಸು ನೆರವು, ‘ಸ್ವಚೇತನ' ಯೋಜನೆಯಡಿ 5 ಸಾವಿರ ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಣೆ ಸೇರಿದಂತೆ ಎಸ್‍ಸಿ-ಎಸ್‍ಟಿ, ಹಿಂ.ವರ್ಗ, ಅಲ್ಪಸಂಖ್ಯಾತರು, ರೈತರು ಹಾಗೂ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.
ಉಚಿತ ಡಯಾಲಿಸಿಸ್ ಸೇವೆ 60 ಸಾವಿರ ಸೈಕಲ್‍ಗೆ ಹೆಚ್ಚಿಸಲಾಗಿದ್ದು, ಅದನ್ನು ಪ್ರಸಕ್ತ ಸಾಲಿನಲ್ಲಿ 1ಲಕ್ಷ ಡಯಾಲಿಸಿಸ್ ಸೈಕಲ್‍ಗೆ ಏರಿಕೆ. ಸ್ವಸಹಾಯ ಗುಂಪುಗಳಿಗೆ ಬಂಡವಾಳ ನಿಧಿ ನೀಡಲು ಹಾಗೂ ಸಹಕಾರ ವಲಯದಲ್ಲಿ ಶೂನ್ಯಬಡ್ಡಿ ದರದಲ್ಲಿ ಸಾಲ ಒದಗಿಸಲು ಕ್ರಮ. ದುಡಿಯುವ ಮಹಿಳೆಯರಿಗಾಗಿ ನಗರ ಪ್ರದೇಶಗಳಲ್ಲಿ 4ಸಾವಿರ ಶಿಶುಪಾಲನಾ ಕೇಂದ್ರ ಮತ್ತು ಗ್ರಾಮೀಣ ಭಾಗದಲ್ಲಿ 500 ಶಿಶು ವಿಹಾರ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.
ವಿಶ್ವದ ಪ್ರತಿಷ್ಠಿತ ವಿವಿಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ವ್ಯಾಸಂಗ ವಿದೇಶದಲ್ಲಿ ಮಾಡಲು ಇಚ್ಛಿಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ತಲಾ 20ಲಕ್ಷ ರೂ.ನಂತೆ ಶೂನ್ಯಬಡ್ಡಿ ದರದಲ್ಲಿ ಸಾಲ ಪಡೆಯಲು ಬಡ್ಡಿ ಸಹಾಯಧನ, ಅಲ್ಪಸಂಖ್ಯಾತ ಪದವಿಧರ ಮಹಿಳೆಯರ ಉದ್ಯೋಗಾವಕಾಶಕ್ಕೆ ಹಾಗೂ ಸ್ವಂತ ಉದ್ದಿಮೆ ಸ್ಥಾಪಿಸಲು ಐಐಎಂಬಿ ಬೆಂಗಳೂರು ಇಲ್ಲಿ 300 ಅಭ್ಯರ್ಥಿಗಳಿಗೆ 3 ಕೋಟಿ ರೂ.ವೆಚ್ಚದಲ್ಲಿ ಉದ್ಯಮ ಶೀಲತೆ ತರಬೇತಿ ನೀಡಲಾಗುವುದು ಎಂದು ಅವರು ಪ್ರಕಟಿಸಿದರು.
ಕೃಷಿ ಮತ್ತು ಪೂರಕ ಚಟುವಟಿಕೆ-39,031 ಕೋಟಿ ರೂ., ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ- 80,318 ಕೋಟಿ ರೂ., ಆರ್ಥಿಕ ಅಭಿವೃದ್ಧಿ ಉತ್ತೇಜನ-61,488 ಕೋಟಿ ರೂ., ಬೆಂಗಳೂರು ಸಮಗ್ರ ಅಭಿವೃದ್ಧಿ-9,698 ಕೋಟಿ ರೂ., ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ-3,458 ರೂ. ಹಾಗೂ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ-68,585 ಕೋಟಿ ರೂ.ಒದಗಿಸಿ ಒಟ್ಟು ಆರು ವಿಭಾಗವಾರು ಬಜೆಟ್ ಮಂಡನೆ ಮಾಡಿದರು.







