ಕೆಮ್ಮಣ್ಣುವಿನಲ್ಲಿ ಮೃತದೇಹ ಎಸೆದ ಪ್ರಕರಣ: ಕೊಲೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿಲ್ಲ - ಎಸ್ಪಿ ಅಕ್ಷಯ್ ಸ್ಪಷ್ಟನೆ

ಉಡುಪಿ: ಕೆಮ್ಮಣ್ಣು ಸಂತೆ ಮಾರುಕಟ್ಟೆ ಬಳಿ ಫೆ.16ರಂದು ಗೂಡ್ಸ್ ರಿಕ್ಷಾ ಟೆಂಪೊದಿಂದ ವ್ಯಕ್ತಿಯೊಬ್ಬರನ್ನು ರಸ್ತೆ ಬದಿ ಎಸೆದು ಹೋದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿದ್ದು, ಇದೊಂದು ಕೊಲೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚೀಂದ್ರ ತಿಳಿಸಿದ್ದಾರೆ.
ಉಡುಪಿ ಎಪಿಎಂಸಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ನಿವಾಸಿ ಹನುಮಂತ (48) ವಿಪರೀತ ಕುಡಿತದ ಚಟ ಹೊಂದಿದ್ದರು. ವಾರದ ಸಂತೆಯ ಹಿನ್ನೆಲೆಯಲ್ಲಿ ಸಿರಗುಂದ ತಾಲೂಕಿನ ಬಸಿಯಾ ಹಾಗೂ ಚಾಲಕ ಬಳ್ಳಾರಿಯ ಮಂಜುನಾಥ ಕೆಮ್ಮಣ್ಣು ಸಂತೆ ಮಾರುಕಟ್ಟೆಗೆ ತರಕಾರಿ ತಂದು ಮಾರಾಟ ಮಾಡುತ್ತಿದ್ದರು. ಆದರೆ ರಿಕ್ಷಾ ಟೆಂಪೊದಲ್ಲಿ ಹನುಮಂತ ವಿಪರೀತ ಕುಡಿದು ಮಲಗಿದ್ದರು. ಏಳದ ಕಾರಣ ಹನುಮಂತ ಅವರನ್ನು ಟೆಂಪೋದಲ್ಲಿ ಹೊರಗಡೆ ಮಲಗುವ ಜಾಗದಲ್ಲಿ ಬಿಟ್ಟು ಹೋಗಿದ್ದರು.
ಆದರೆ ವಿಪರೀತ ಕುಡಿದಿರುವುದರಿಂದ ಹನುಮಂತನ ದೇಹ ಅಲುಗಾಡುತ್ತಿರಲಿಲ್ಲ. ಅದನ್ನು ನೋಡಿ ಜನ, ಹನುಮಂತನನ್ನು ಸಾಯಿಸಿ ಎಸೆದು ಹೋಗಿದ್ದಾರೆ ಎಂದು ತಿಳಿದುಕೊಂಡಿದ್ದರು. ಆದರೆ ಸಿಸಿಟಿವಿ ಫುಟೇಜ್ ಪರಿಶೀಲನೆ ನಡೆಸಿದಾಗ ಹನುಮಂತನನ್ನು ರಸ್ತೆ ಬದಿ ಬಿಟ್ಟು ಹೋದ ಬಳಿಕವೂ ಕೈಕಾಲು ಗಳು ಅಲುಗಾಡುತ್ತಿರುವುದು ಕಂಡುಬಂದಿದೆ. ಬಳಿಕ ಹನುಮಂತ ವಿಪರೀತ ಕುಡಿತದಿಂದ ಅಥವಾ ಬೇರೆ ಕಾರಣದಿಂದ ಮೃತಪಟ್ಟಿರಬಹುದು. ಅದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬರಬೇಕಾಗಿದೆ ಎಂದರು.
ಮೃತದೇಹದ ಮೈಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ. ವಿಚಾರಣೆ ನಡೆಸಿದಾಗ ಇವರ ಮಧ್ಯೆ ಯಾವುದೇ ಗಲಾಟೆ, ಹೊಡೆದಾಟ ಆಗಿಲ್ಲ ಎಂಬುದು ಗೊತ್ತಾಗಿದೆ. ಮೃತರ ಮನೆಯವರು ಬಂದಿದ್ದು, ಅದರಂತೆ ಮಲ್ಪೆ ಠಾಣೆಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ ಲಾಗುತ್ತಿದೆ. ಮರಣೋತ್ತರ ಪರೀಕ್ಷೆಯಿಂದ ಸತ್ಯ ವಿಷಯ ಹೊರಬರಲಿದೆ. ಜನರು ಯಾವುದೇ ಕಾರಣಕ್ಕೂ ಭಯಭೀತ ಆಗುವ ಅಗತ್ಯ ಇಲ್ಲ ಎಂದು ಎಸ್ಪಿ ತಿಳಿಸಿದರು.







