ಬಿಲ್ಲವ ಈಡಿಗ ಸಮುದಾಯಕ್ಕೆ ವಂಚಿಸಿದ ಬಜೆಟ್: ಪ್ರವೀಣ್ ಪೂಜಾರಿ

ಉಡುಪಿ : ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಘೋಷಣೆ ಕುರಿತು ಮುಖ್ಯಮಂತ್ರಿಯವರು ನೀಡಿದ ಭರವಸೆ ಸುಳ್ಳಾಗಿದೆ ಎಂದು ಉಡುಪಿ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಎಂ.ಪೂಜಾರಿ ಟೀಕಿಸಿದ್ದಾರೆ.
ಸಮಾಜದ ಬಹುಕಾಲದ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಸಚಿವ ಸುನಿಲ್ ಕುಮಾರ್ ನೇತೃತ್ವದಲ್ಲಿ ಬಿಲ್ಲವ ಸಮುದಾಯದ ಮುಖಂಡರ ನಿಯೋಗ ಸಿಎಂ ಬಸವರಾಜ್ ಬೊಮ್ಮಾಯಿಗೆ ಜ.5ರಂದು ಮನವಿ ಸಲ್ಲಿಸಿದ್ದ ಸಂದರ್ಭ ನಿಗಮ ಸ್ಥಾಪನೆಗೆ ಸ್ಪಷ್ಟ ಭರವಸೆಯ ಒಪ್ಪಿಗೆ ನೀಡಿ ಸೂಕ್ತ ಅನುದಾನ ದೊಂದಿಗೆ ಈ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಆದರೂ ಈ ಬಾರಿಯ ಬಜೆಟ್‌ನಲ್ಲಿ ಯಾವುದೆ ಕ್ರಮ ಕೈಗೊಳ್ಳದೆ ಮತ್ತೆ ಬಿಲ್ಲವ, ಈಡಿಗರಿಗೆ ಅನ್ಯಾಯವೆಸಗಿದ್ದಾರೆ.
ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಸಮಾಜದ ಅಭಿವೃದ್ಧಿ ಹಾಗೂ ನಾರಾಯಣ ಗುರು ತತ್ವ ಆದರ್ಶಗಳ ಪ್ರಚಾರ ದೃಷ್ಟಿಯಿಂದ ನಿಗಮ ಸ್ಥಾಪನೆ ಅಗತ್ಯವಾಗಿದ್ದರೂ ಹಿಂದುಳಿದ ಸಮಾಜದ ನಮಗೆ ಅನ್ಯಾಯವಾಗಿದೆ. ಸಮಾಜದ ಮುಖಂಡರ ಸಭೆ ನಡೆಸಿ ನಿಯೋಗ ಕೊಂಡೊಯ್ದ ಸುನಿಲ್ ಕುಮಾರ್ ಹಾಗೂ ಆಶ್ವಾಸನೆಯನ್ನು ಸ್ವಾಗತಿಸಿ ಬೆಂಬಲಿಸಿದ ಜನಪ್ರತಿನಿಧಿಗಳೆಲ್ಲರೂ ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಇಂದು ಮಂಡಿಸಿದ ಬಜೆಟ್‌ನ ಭರವಸೆಗಳು ನಂಬಿಕೆಗೆ ಅರ್ಹ ಅಲ್ಲ. ಯಾಕೆಂದರೆ ಕಳೆದ ಬಜೆಟ್‌ನಲ್ಲಿ ವಿವಿಧ ಸಮುದಾಯಗಳ ಮೀಸಲಾತಿ ಹೆಚ್ಚಳದ ಭರವಸೆ ನೀಡಿತ್ತು. ಅಲ್ಲದೆ ಅವರ ಪ್ರಣಾಳಿಕೆ ಮತ್ತು ಈ ಹಿಂದಿನ ಬಜೆಟ್‌ನ ಶೇ.10 ಭರವಸೆಗಳನ್ನು ಇನ್ನೂ ಈಡೇರಿಸಿಲ್ಲ. ಆದ್ದರಿಂದ ಈ ಬಜೆಟ್ ಬರೇ ನಾಮಕಾವಸ್ತೆಗೆ ಓದುತ್ತಿರುವ ಬಜೆಟ್.
-ಯು.ಶಬ್ಬೀರ್ ಅಹ್ಮದ್, ಉಪಾಧ್ಯಕ್ಷರು, ಉಡುಪಿ ಜಿಲ್ಲಾ ಕಾಂಗ್ರೆಸ್