ಫೆ.20ಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಉಡುಪಿ ಜಿಲ್ಲೆಗೆ ಭೇಟಿ

ಉಡುಪಿ, ಫೆ.17: ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ಸನ್ನದ್ಧಗೊಳಿಸಲು, ಜಿಲ್ಲೆಯ 1111 ಬೂತ್ ಸಮಿತಿಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಫೆ.20ರಂದು ಉಡುಪಿ ಜಿಲ್ಲೆಗೆ ಒಂದು ದಿನದ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ನಗರದ ಶಾರದಾ ಇಂಟರ್‌ನೇಷನಲ್ ಹೋಟೆಲ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಜಿಲ್ಲೆಯ ಒಟ್ಟು 13,332 ಮಂದಿ ಬೂತ್ ಸಮಿತಿಗಳ ಸದಸ್ಯರು ಉಡುಪಿ ಎಂಜಿಎಂ ಕಾಲೇಜು ಕ್ರೀಡಾಂಗಣದಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಬೆಳಗ್ಗೆ 11ಗಂಟೆಗೆ ಸಮಾವೇಶದಲ್ಲಿ ಭಾಗವಹಿಸುವ ರಾಷ್ಟ್ರೀಯ ಅಧ್ಯಕ್ಷರು ಚುನಾವಣಾ ತಯಾರಿ ಬಗ್ಗೆ ಕಾರ್ಯಕರ್ತರಿಗೆ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ ಮಾಡಲಿದ್ದಾರೆ ಎಂದರು.
ಜೆ.ಪಿ.ನಡ್ಡಾ ಅವರು ಬೆಳಗ್ಗೆ 9:30ಕ್ಕೆ ಮಂಗಳೂರಿನಿಂದ ಹೆಲಿಕಾಫ್ಟರ್‌ನಲ್ಲಿ ಆದಿಉಡುಪಿ ಹೆಲಿಪ್ಯಾಡ್‌ಗೆ ಬಂದಿಳಿಯಲಿದ್ದಾರೆ. ಅಲ್ಲಿಂದ ನೇರವಾಗಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಪರ್ಯಾಯ ಸ್ವಾಮೀಜಿಗಳ ಆಶೀರ್ವಾದ ಪಡೆಯಲಿದ್ದಾರೆ. ಅಲ್ಲಿಂದ ಅವರು ನೇರವಾಗಿ ಸಮಾವೇಶ ನಡೆಯುವ ಎಂಜಿಎಂ ಕಾಲೇಜು ಮೈದಾನಕ್ಕೆ ಆಗಮಿಸಲಿದ್ದಾರೆ ಎಂದರು.
ಅಪರಾಹ್ನ 1:30ಕ್ಕೆ ಆದಿಉಡುಪಿ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್‌ನಲ್ಲಿ ಬೈಂದೂರಿಗೆ ತೆರಳಲಿದ್ದಾರೆ. ಅಪರಾಹ್ನ 2:00ಗಂಟೆಗೆ ತ್ರಾಸಿಯ ಮುಳ್ಳಿಕಟ್ಟೆ ಹೊಸೂರು ನಗುನಗರದಲ್ಲಿ ಆಯೋಜಿಸಲಾಗುವ ಭಾರೀ ಬಹಿರಂಗ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಭೆಯಲ್ಲಿ 20,000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸುರೇಶ್‌ನಾಯಕ್ ತಿಳಿಸಿದರು.
ಬೈಂದೂರಿನಲ್ಲಿ ನಡೆಸಲುದ್ದೇಶಿಸಿದ್ದ ಬೃಹತ್ ವಾಹನ ಜಾಥಾವನ್ನು ಕೈಬಿಡಲಾಗಿದೆ ಎಂದು ತಿಳಿಸಿದ ಕುಯಿಲಾಡಿ, ಉಡುಪಿ ಮತ್ತು ಬೈಂದೂರು ಸಭೆಯ ಮೂಲಕ ಜಿಲ್ಲೆಯಲ್ಲಿ ಬಿಜೆಪಿಯ ಚುನಾವಣಾ ರಣಕಹಳೆ ಮೊಳಗಲಿದೆ ಎಂದರು. ಈಗಾಗಲೇ ನಿರಂತರ ವಿವಿಧ ಚಟುವಟಿಕೆಗಳ ಮೂಲಕ ಚುನಾವಣೆ ತಯಾರಿ ನಡೆಸಿದ್ದೇವೆ. ಎರಡೆರಡು ಬಾರಿ ಮನೆಮನೆ ಭೇಟಿಯೂ ಮುಗಿದಿದೆ.
ಉಡುಪಿ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಸಿ.ಟಿ.ರವಿ ಹಾಗೂ ಇತರ ರಾಜ್ಯಮಟ್ಟದ ನಾಯಕರು ಭಾಗವಹಿಸುವ ನಿರೀಕ್ಷೆ ಇದೆ. ಇನ್ನು ಐದು ಯಾತ್ರೆಗಳು ಜಿಲ್ಲೆಗೆ ಬರಲಿವೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ, ತಾಲೂಕುಗಳಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜನೆ ಗೊಳ್ಳಲಿದೆ.ಈ ಮೂಲಕ ಕಳೆದ ಬಾರಿ ಗೆದ್ದ ಐದೂ ಸ್ಥಾನಗಳನ್ನು ಇನ್ನಷ್ಟು ಅಧಿಕ ಮತಗಳ ಅಂತರದಿಂದ ಗೆಲ್ಲುವ ಪ್ರಯತ್ನ ನಡೆಸುತ್ತೇವೆ ಎಂದರು.
ಅಭ್ಯರ್ಥಿಗಳ ಘೋಷಣೆ ಕುರಿತು ಪ್ರಶ್ನಿಸಿದಾಗ, ಪಕ್ಷದಲ್ಲಿ ಯಾವತ್ತೂ ಚುನಾವಣೆ ಘೋಷಣೆಯಾದ ಬಳಿಕವೇ ಅಭ್ಯರ್ಥಿಗಳ ಘೋಷಣೆಯಾ ಗುತ್ತದೆ. ಈ ಬಾರಿಯೂ ಅದೇ ಸಂಪ್ರದಾಯ ಪಾಲನೆಯಾಗಲಿದೆ ಎಂದು ಸುರೇಶ್ ನಾಯಕ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಶಿವಕುಮಾರ್ ಅಂಬಲಪಾಡಿ, ಶ್ರೀನಿಧಿ ಹೆಗಡೆ ಉಪಸ್ಥಿತರಿದ್ದರು.