ಹೊಸ ಎಫ್ಎಂ ರೇಡಿಯೊ ಕೇಂದ್ರಗಳ ಹರಾಜಿಗೆ ಕೇಂದ್ರದ ಚಿಂತನೆ

ಹೊಸದಿಲ್ಲಿ,ಫೆ.17: ದೇಶದಲ್ಲಿ ಎಫ್ಎಂ ರೇಡಿಯೊ(FM radio) ವ್ಯಾಪ್ತಿಯನ್ನು ವಿಸ್ತರಿಸಲು ಈ ವರ್ಷ ಹೊಸ ಕೇಂದ್ರಗಳ ಹರಾಜು ನಡೆಸಲು ಕೇಂದ್ರ ಸರಕಾರವು ಚಿಂತನೆ ನಡೆಸುತ್ತಿದೆ ಎಂದು ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವಚಂದ್ರ(Apurva Chandra) ಅವರು ತಿಳಿಸಿದ್ದಾರೆ.
ಗುರುವಾರ ಬ್ರಾಡ್ ಕಾಸ್ಟ್ ಇಂಜಿನಿಯರಿಂಗ್ ಸೊಸೈಟಿ ಎಕ್ಸ್ಪೋ -2023 ನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಎಫ್ಎಂ ರೇಡಿಯೋ ಸೇವೆ ಪ್ರಸ್ತುತ ದೇಶದ ಕೇವಲ ಶೇ.60ರಷ್ಟು ವ್ಯಾಪ್ತಿಯಲ್ಲಿ ಲಭ್ಯವಿದೆ ಎಂದು ಹೇಳಿದರು.
ಕೇಂದ್ರವು ಇತ್ತೀಚಿಗೆ ಪ್ರಸಾರ ಮೂಲಸೌಕರ್ಯ ಮತ್ತು ನೆಟ್ ವರ್ಕ್ ಅಭಿವೃದ್ಧಿ ಯೋಜನೆಯಡಿ 2,500 ಕೋ.ರೂ.ಗಳನ್ನು ಹಂಚಿಕೆ ಮಾಡಿದ್ದು,ಪ್ರಸಾರ ಭಾರತಿಯ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಲು ನಾಲ್ಕು ವರ್ಷಗಳಲ್ಲಿ ಈ ಹಣವನ್ನು ಬಳಸಬೇಕಿದೆ ಎಂದು ಅವರು ತಿಳಿಸಿದರು.
ಮೊಬೈಲ್ ಫೋನ್ ಗಳಿಗೆ ಟಿವಿ ನೇರಪ್ರಸಾರ ಟ್ರಯಲ್ ಳ ಕುರಿತಂತೆ ಅಪೂರ್ವ ಚಂದ್ರ ಅವರು,ಇದಕ್ಕಾಗಿ ಐಐಟಿ-ಕಾನ್ಪುರ ಮತ್ತು ಸಂಖ್ಯಾ ಲ್ಯಾಬ್ಸ್ ದಿಲ್ಲಿಯ ಕರ್ತವ್ಯ ಪಥ ಮತ್ತು ಸಮೀಪದ ಪ್ರದೇಶಗಳಲ್ಲಿ ಟ್ರಾನ್ಸ್‌ಮಿಟರ್ ಗಳನ್ನು ಸ್ಥಾಪಿಸಿವೆ. ಈ ತಂತ್ರಜ್ಞಾನವು ಟವಿ ಮಾಧ್ಯಮಗಳ ತಲುಪುವಿಕೆ ವ್ಯಾಪ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ತಮ್ಮ ಸಾಧನಗಳಲ್ಲಿ ಟಿವಿ ಸಂಕೇತಗಳನ್ನು ಸ್ವೀಕರಿಸಲು ಮೊಬೈಲ್ ಫೋನ್ ಬಳಕೆದಾರರು ವಿಶೇಷ ಡೊಂಗಲ್ ಅನ್ನು ಅಳವಡಿಸಬೇಕಾಗುತ್ತದೆ. ಅಲ್ಲದೆ ಟಿವಿ ಸಿಗ್ನಲ್ ರಿಸೀವರ್ಗಳನ್ನು ಮೊಬೈಲ್ ಫೋನ್ ಗಳಲ್ಲಿ ಸ್ಥಾಪಿಸುವಂತೆ ತಯಾರಕರನ್ನೂ ಉತ್ತೇಜಿಸಬಹುದು ಎಂದರು.







