ರಾಜಮೌಳಿಯ ಚಿತ್ರಗಳು ಹಿಂದುತ್ವಕ್ಕೆ, ಬಿಜೆಪಿಗೆ ಪೂರಕವಾಗಿದೆಯೇ? : RRR ನಿರ್ದೇಶಕ ಪ್ರತಿಕ್ರಿಯಿಸಿದ್ದು ಹೀಗೆ...
ಹೊಸದಿಲ್ಲಿ: ತಮ್ಮ ಚಿತ್ರಗಳಲ್ಲಿ ಹಿಂದುತ್ವ ರಾಜಕಾರಣಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತಾರೆ ಹಾಗೂ, ಬ್ರಾಹ್ಮಣ್ಯವನ್ನು ಪ್ರತಿಪಾದಿಸುತ್ತಾರೆ ಎನ್ನುವ ಆರೋಪಗಳಿಗೆ ಆರ್‌ಆರ್‌ಆರ್, ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್‌ಎಸ್ ರಾಜಮೌಳಿ ಪ್ರತಿಕ್ರಿಯೆ ನೀಡಿದ್ದಾರೆ.
The New Yorker ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹಿಂದುತ್ವ ರಾಜಕಾರಣದ ಬಗೆಗಿನ ಸಂಬಂಧ, ಬಿಜೆಪಿ, ಆರ್‌ಎಸ್‌ಎಸ್, ಮುಸ್ಲಿಂ ಧ್ವೇಷ, ಬಲಪಂಥೀಯ ರಾಷ್ಟ್ರೀಯತೆ ಮೊದಲಾದವುಗಳ ಕುರಿತ ಪ್ರಶ್ನೆಗಳನ್ನು ರಾಜಮೌಳಿ ಎದುರಿಸಿದ್ದಾರೆ.
(ಚಿತ್ರಗಳಲ್ಲಿ) ರಾಷ್ಟ್ರೀಯವಾದಿ ಪರ ಅಥವಾ ಮುಸ್ಲಿಂ ವಿರೋಧಿಯಾಗಲು ಬಿಜೆಪಿ ಬೆಂಬಲಿಗರಿಂದ ಅಥವಾ ಆರ್‌ಎಸ್‌ಎಸ್ ಕಡೆಯಿಂದ ಯಾವುದಾದರೂ ಒತ್ತಡ ಬಂದಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜಮೌಳಿ, ಅಂತಹ ಯಾವುದೇ ಒತ್ತಡ ಬಂದಿಲ್ಲ ಎಂದಿದ್ದಾರೆ.
ಅಜೆಂಡಾಗೆ ತಕ್ಕಂತೆ ಸಿನೆಮಾ ಮಾಡಿ ಎಂದು ಯಾರು ಕೂಡಾ ನನ್ನ ಬಳಿಗೆ ನೇರವಾಗಿ ಬಂದಿಲ್ಲ, ಅದು ಯಾವುದೇ ಅಜೆಂಡಾ ಇರಲಿ, ನನ್ನ ಬಳಿಗೆ ಯಾರೂ ಬಂದಿಲ್ಲ ಎಂದು ರಾಜಮೌಳಿ ಹೇಳಿದ್ದಾರೆ.
ಅಷ್ಟೇನೂ ಪ್ರಮುಖರಲ್ಲದ ವ್ಯಕ್ತಿಗಳು ತನ್ನ ಸಿನೆಮಾಗಳ ಬಗ್ಗೆ ಆಕ್ಷೇಪವೆತ್ತುತ್ತಾರೆ ಎಂದ ಅವರು, “ಕೆಲವೊಮ್ಮೆ ಮುಸ್ಲಿಮರು ಆಕ್ಷೇಪವೆತ್ತುತ್ತಾರೆ, ಕೆಲವೊಮ್ಮೆ ಹಿಂದುಗಳು, ಇನ್ನೂ ಕೆಲವೊಮ್ಮೆ ಇತರೆ ಜಾತಿಯ ಮಂದಿ ಆಕ್ಷೇಪವೆತ್ತುತ್ತಾರೆ” ಎಂದಿದ್ದಾರೆ. ಅಲ್ಲದೆ, ಹುಸಿ-ಲಿಬರಲ್ ಅಥವಾ ಹಿಂದೂ ಅಜೆಂಡಾದಿಂದ ತಾನು ದೂರ ಇರಲು ಬಯಸುವುದಾಗಿ ಅವರು ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ (ಹಿಂದುತ್ವ) ರಾಷ್ಟ್ರೀಯತೆ ಮತ್ತು ಮುಸ್ಲಿಂ ವಿರೋಧಿತನ ಭಾರತದ ಸಿನೆಮಾಗಳಲ್ಲಿ ಪ್ರತಿಫಲಿಸುತ್ತಿದೆಯೇ ಅಥವಾ ಪ್ರಭಾವ ಬೀರುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಸಿನೆಮಾಗಳು ಸಮಾಜದ ಭಾಗವನ್ನೇ ಪ್ರತಿಫಲಿಸುತ್ತದೆ. ಯಾಕೆಂದರೆ ಚಿತ್ರ ತಯಾರಕರು ಪ್ರೇಕ್ಷಕರಿಗೆ ತಲುಪಬೇಕಿರುತ್ತದೆ. ಸಮಾಜದಲ್ಲಿ ಆ ರೀತಿಯ ಭಾವನೆಗಳು ಹೆಚ್ಚಾದರೆ ಅಂತಹ ಚಿತ್ರಗಳು ಬರುತ್ತವೆ. ಆದರೆ ನಾನು ಯಾವಾಗಲೂ ಅದರಿಂದ ದೂರವಿರುತ್ತೇನೆ. ನಾನು ಸಂಪೂರ್ಣವಾಗಿ ವಿಭಿನ್ನ ಮಾರ್ಗದಲ್ಲಿ ಹೋಗುತ್ತೇನೆ” ಎಂದು ರಾಜಮೌಳಿ ಹೇಳಿದ್ದಾರೆ.
ರಾಜಮೌಳಿ "ಬಿಜೆಪಿ ಅಥವಾ ಬಿಜೆಪಿಯ ಅಜೆಂಡಾವನ್ನು ಬೆಂಬಲಿಸುತ್ತಿದ್ದಾರೆ" ಎಂದು ಆರೋಪಿಸಿದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಆರ್‌ಆರ್‌ಆರ್ ಚಿತ್ರಕ್ಕೆ ಬಿಜೆಪಿ ನಾಯಕರೊಬ್ಬರು ಎತ್ತಿದ ಆಕ್ಷೇಪಣೆಯನ್ನು, ಚಿತ್ರ ಮಂದಿರಕ್ಕೆ ಬೆಂಕಿ ಹಾಕುವುದಾಗಿ ನೀಡಿದ್ದ ಬೆದರಿಕೆಯನ್ನು ಉಲ್ಲೇಖಿಸಿದರು. ಆರ್‌ಆರ್‌ಆರ್ ಚಿತ್ರದಲ್ಲಿ ಬರುವ ಭೀಮ್ ಪಾತ್ರಕ್ಕೆ ಮುಸ್ಲಿಂ ವೇಷ ಹಾಕಿದ ಬಗ್ಗೆ 2020 ರಲ್ಲಿ ಹಿಂದುತ್ವವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
“ಬಿಜೆಪಿ ನಾಯಕರೊಬ್ಬರು ಆರ್‌ಆರ್‌ಆರ್ ಪ್ರದರ್ಶಿಸುವ ಥಿಯೇಟರ್‌ಗಳನ್ನು ಸುಟ್ಟುಹಾಕುವುದಾಗಿ ಬೆದರಿಕೆ ಹಾಕಿದ್ದರು. ಭೀಮ್ ಪಾತ್ರದಿಂದ ಮುಸ್ಲಿಂ ಟೋಪಿ ತೆಗೆಯದಿದ್ದರೆ ನನ್ನನ್ನು ರಸ್ತೆಯಲ್ಲಿ ಹೊಡೆಯುವುದಾಗಿ ಹೇಳಿದರು. ಹಾಗಾಗಿ ನಾನು ಬಿಜೆಪಿಯವನೋ ಅಲ್ಲವೋ ಎಂಬುದನ್ನು ಜನರು ನಿರ್ಧರಿಸಬಹುದು” ಎಂದು ಅವರು ಹೇಳಿದ್ದಾರೆ.
“ನಾನು ಹಿಂದೂ ಅಥವಾ ಹುಸಿ-ಉದಾರವಾದಿ ಅಜೆಂಡಾದಿಂದ ದೂರವಿರುತ್ತೇನೆ. ನನ್ನ ಪ್ರೇಕ್ಷಕರಲ್ಲಿ ಆ ಎರಡೂ ಗುಂಪುಗಳ ಪ್ರೇಕ್ಷಕರು ಇದ್ದಾರೆ ಎಂದು ನನಗೆ ತಿಳಿದಿದೆ. ನಾನು ಪ್ರೇಕ್ಷಕರ ಭಾವನಾತ್ಮಕ ಅಗತ್ಯಗಳನ್ನು ಪೂರೈಸುತ್ತಿದ್ದೇನೆ.” ಎಂದು ರಾಜಮೌಳಿ ಹೇಳಿದ್ದಾರೆ.
ಇದನ್ನು ಓದಿ: 'ಶಿವಸೇನೆ' ಹೆಸರು, 'ಬಿಲ್ಲುಬಾಣ' ಚಿಹ್ನೆ ಏಕನಾಥ್ ಶಿಂಧೆ ಬಣದ ಪಾಲಿಗೆ: ಚುನಾವಣಾ ಆಯೋಗ ಆದೇಶ