ಫೆ.19: ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷ ರಹೀಮ್ ಮಂಗಳೂರಿಗೆ

ಮಂಗಳೂರು, ಫೆ.17: ಹರೇಕಳ ಗ್ರಾಮದಲ್ಲಿ ಗೇಣಿದಾರ ರೈತರ, ಹೆಂಚು, ನೇಯ್ಗೆ, ಬೀಡಿ ಕಾರ್ಮಿಕರ ಹೋರಾಟದ ನೇತೃತ್ವ ವಹಿಸಿ ಕಮ್ಯೂನಿಸ್ಟ್ ಪಕ್ಷವನ್ನು ಮುನ್ನಡೆಸಿದ್ದ ಹಿರಿಯ ಸಂಗಾತಿ ಕಡೆಂಜ ಕಾಮಣ್ಣ ರೈಯ ಸ್ಮರಣಾರ್ಥವಾಗಿ ಹರೇಕಳದಲ್ಲಿ ನಿರ್ಮಿಸಲಾದ ‘ಕಾಂ. ಕಾಮಣ್ಣ ರೈ ಭವನ ಡಿವೈಎಫ್‌ಐ ನವೀಕೃತ ಕಟ್ಟಡ’ದ ಉದ್ಘಾಟನೆಯು ಫೆ.19ರಂದು ಸಂಜೆ 4ಕ್ಕೆ ನಡೆಯಲಿದೆ.
ಡಿವೈಎಫ್‌ಐ ಅಖಿಲ ಭಾರತ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಎ.ಎ. ರಹೀಂ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಈ ವೇಳೆ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಕಾರ್ಮಿಕ ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್, ಪಾವೂರು ಗ್ರಾಪಂ ಮಾಜಿ ಸದಸ್ಯ ವಿವೇಕ್ ರೈ, ಉದ್ಯಮಿ ಕಡೆಂಜ ಸುರಕ್ಷಿತ್ ರೈ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಸಮಾವೇಶದ ಅಧ್ಯಕ್ಷತೆಯನ್ನು ಡಿವೈಎಫ್‌ಐ ಉಳ್ಳಾಲ ವಲಯದ ಅಧ್ಯಕ್ಷ ರಫೀಕ್ ಹರೇಕಳ ವಹಿಸಲಿದ್ದಾರೆ. ಈ ಸಂದರ್ಭ ಪದ್ಮಶ್ರೀ ವಿಜೇತ ಹರೇಕಳ ಹಾಜಬ್ಬ ಮತ್ತು ಹೈನುಗಾರಿಕೆಯ ಸಾಧಕಿ ಮೈಮುನಾ ಅಬ್ದುಲ್ ಮಜೀದ್ ರಾಜ್‌ಕಮಲ್ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ಡಿವೈಎಫ್‌ಐ ಉಳ್ಳಾಲ ವಲಯ ಕಾರ್ಯದರ್ಶಿ ಸುನೀಲ್ ತೇವುಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.