ಪುಟಿನ್ ಸಹಾಯಕಿ ಮಹಡಿಯಿಂದ ಬಿದ್ದು ಮೃತ್ಯು

ಮಾಸ್ಕೊ, ಫೆ.17: ರಶ್ಯದ ಉನ್ನತ ಶ್ರೇಣಿಯ ರಕ್ಷಣಾ ಅಧಿಕಾರಿಯೊಬ್ಬರು ಸೈಂಟ್ಸ್ ಪೀಟರ್ಸ್ಬರ್ಗ್ನಲ್ಲಿ 16ನೆಯ ಮಹಡಿಯ ಕಿಟಿಕಿಯಿಂದ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ `ಡೈಲಿಮೈಲ್' ವರದಿ ಮಾಡಿದೆ.
ಉಕ್ರೇನ್ ಯುದ್ಧಕ್ಕೆ ಹಣ ಸಹಾಯ ಮಾಡಿದ ರಶ್ಯ ರಕ್ಷಣಾ ಇಲಾಖೆಯ ಆರ್ಥಿಕ ವಿಭಾಗದ ಮುಖ್ಯಸ್ಥೆ, ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಸಹಾಯಕಿ ಮರೀನಾ ಯಾಂಕಿನಾ ಅವರ ಮೃತದೇಹವು ಸೈಂಟ್ ಪೀಟರ್ಸ್ಬರ್ಗ್ ನ ಝಂಶಿನಾ ರಸ್ತೆಯ ಮನೆಯೊಂದರ ಪ್ರವೇಶದ್ವಾರದ ಬಳಿ ಪತ್ತೆಯಾಗಿದೆ. ಅವರು ಕಟ್ಟಡದ 16ನೆಯ ಮಹಡಿಯಿಂದ ಕೆಳಬಿದ್ದು ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಅವರು ನಿಗೂಢರೀತಿಯಲ್ಲಿ ಕೆಳಬಿದ್ದಿರುವ ಪ್ರಕರಣದ ಬಗ್ಗೆ ರಶ್ಯನ್ ತನಿಖಾ ಸಮಿತಿ ಉನ್ನತ ಮಟ್ಟದ ತನಿಖೆ ಆರಂಭಿಸಿದೆ.
ಮರೀನಾ ಅವರ ಮೊಬೈಲ್ ಸೇರಿದಂತೆ ಕೆಲವು ವೈಯಕ್ತಿಕ ವಸ್ತುಗಳು 16ನೆಯ ಮಹಡಿಯಲ್ಲಿ ಪತ್ತೆಯಾಗಿದೆ. ತನ್ನ ಮಾಜಿ ಪತಿಗೆ ಕರೆ ಮಾಡಿದ್ದ ಮರೀನಾ `ತಾನೀಗ 16ನೆಯ ಮಹಡಿಯಲ್ಲಿದ್ದು ಕೆಳಗೆ ಹಾರುವ ನಿರ್ಧಾರ ಕೈಗೊಂಡಿದ್ದೇನೆ. ಕೆಲವು ವೈಯಕ್ತಿಕ ವಸ್ತುಗಳು 16ನೆಯ ಮಹಡಿಯಲ್ಲಿವೆ' ಎಂದು ತಿಳಿಸಿ, ಪೊಲೀಸರಿಗೆ ಕರೆ ಮಾಡುವಂತೆ ಹೇಳಿದ್ದಳು ಎಂದು ಮಾಧ್ಯಮಗಳು ವರದಿ ಮಾಡಿವೆ.
ರಶ್ಯ ರಕ್ಷಣಾ ಇಲಾಖೆಯ ಪಶ್ಚಿಮ ಸೇನಾ ವಲಯಕ್ಕೆ ಸೇರ್ಪಡೆಗೊಳ್ಳುವ ಮುನ್ನ ಫೆಡರಲ್ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮರೀನಾ, ಉಕ್ರೇನ್ ವಿರುದ್ಧದ ಯುದ್ಧಕ್ಕೆ ಸಂಪನ್ಮೂಲ ಕ್ರೋಢೀಕರಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಯುದ್ಧ ಆರಂಭವಾದ ಬಳಿಕ ರಶ್ಯದ ಹಲವು ಉನ್ನತಾಧಿಕಾರಿಗಳು ನಿಗೂಢವಾಗಿ ಸಾವನ್ನಪ್ಪಿದ್ದಾರೆ.







