ಕ್ಯಾನ್ಸರ್ ಗೆ ಆಸ್ಪಿರಿನ್ ಮಾತ್ರೆ: ಐಎಂಎಫ್ ಒಪ್ಪಂದದ ಬಗ್ಗೆ ಇಮ್ರಾನ್ ವ್ಯಾಖ್ಯಾನ

ಇಸ್ಲಮಾಬಾದ್, ಫೆ.17: ಪಾಕಿಸ್ತಾನವು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಜತೆ ಮಾಡಿಕೊಂಡಿರುವ ಒಪ್ಪಂದವು ಕ್ಯಾನ್ಸರ್ ಗೆ ಆಸ್ಪಿರಿನ್ ಮಾತ್ರೆ ನೀಡಿದಂತಾಗಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ಖಾನ್ ವ್ಯಾಖ್ಯಾನಿಸಿರುವುದಾಗಿ `ದಿ ಡಾನ್' ವರದಿ ಮಾಡಿದೆ.
ಐಎಂಎಫ್ ಜತೆಗಿನ ಒಪ್ಪಂದವು ದೇಶದ ಆರ್ಥಿಕ ಬಿಕ್ಕಟ್ಟಿಗೆ ತಾತ್ಕಾಲಿಕ ಉಪಶಮನವನ್ನಷ್ಟೇ ಒದಗಿಸಲಿದೆ. ಇದರಿಂದ ದೇಶದ ಸಾಲದ ಹೊರೆ ಹೆಚ್ಚುವ ಮೂಲಕ ದೇಶವು ಮತ್ತೊಂದು ವಿಪತ್ತಿನತ್ತ ಸಾಗಲಿದೆ ಎಂದು ಟಿವಿ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಇಮ್ರಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಗಿನ ಸರಕಾರದ ಆರ್ಥಿಕ ನೀತಿಯನ್ನು ಟೀಕಿಸಿದ ಅವರು, ಇಮ್ರಾನ್ರನ್ನು ರಾಜಕೀಯ ಕ್ಷೇತ್ರದಿಂದ ಹೊರಗಟ್ಟುವ ಏಕೈಕ ಉದ್ದೇಶಕ್ಕೆ ದೇಶವನ್ನು ನಾಶಗೊಳಿಸಬೇಡಿ ಎಂದು ಆಗ್ರಹಿಸಿದರು. ಪಾಕಿಸ್ತಾನವು ಶ್ರೀಲಂಕಾದ ರೀತಿ ಭಾರೀ ಆರ್ಥಿಕ ವಿಪತ್ತಿನ ಅಂಚಿನತ್ತ ಸಾಗುತ್ತಿದ್ದು ದೇಶದ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ ಎಂದು, ಫಿಚ್ ಶ್ರೇಯಾಂಕ ಏಜೆನ್ಸಿಯ ವರದಿಯನ್ನು ಉಲ್ಲೇಖಿಸಿ ಇಮ್ರಾನ್ಖಾನ್ ಹೇಳಿದ್ದಾರೆ.
ಮಿನಿ ಬಜೆಟ್ಗೆ ಅನುಮೋದನೆ ನೀಡುವಂತೆ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಆಲ್ವಿ ಮೇಲೆ ಒತ್ತಡ ತರುತ್ತಿರುವ ಪಾಕಿಸ್ತಾನ್ ಡೆಮೊಕ್ರಾಟಿಕ್ ಮೂಮೆಂಟ್(ಪಿಡಿಎಂ) ಸರಕಾರ, ಈ ಮೂಲಕ ಅಧಿಕ ಹಣದುಬ್ಬರದ ಹೊರೆಯನ್ನು ಅಧ್ಯಕ್ಷರ ಹೆಗಲಿಗೆ ವರ್ಗಾಯಿಸಲು ಪ್ರಯತ್ನಿಸುತ್ತಿದೆ. ಪಾಕಿಸ್ತಾನವನ್ನು ಇನ್ನಷ್ಟು ವಿಪತ್ತಿನಿಂದ ಪಾರು ಮಾಡಲು ಇರುವ ಏಕೈಕ ಮಾರ್ಗವೆಂದರೆ ತಕ್ಷಣ ಸಾರ್ವತ್ರಿಕ ಚುನಾವಣೆ ನಡೆಸಿ ಜನತೆಗೆ ನಿರ್ಧಾರದ ಹಕ್ಕನ್ನು ವರ್ಗಾಯಿಸುವುದಾಗಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.







