ಇಸ್ರೇಲ್ ಜೈಲಿನಲ್ಲಿ ಫೆಲೆಸ್ತೀನ್ ಕೈದಿಗಳ ಪ್ರತಿಭಟನೆ

ರಮಲ್ಲಾ, ಫೆ.17: ಇಸ್ರೇಲ್ ನ ರಾಷ್ಟ್ರೀಯ ಭದ್ರತಾ ಸಚಿವ ಇತಾಮರ್ ಬೆನ್ ಗ್ವಿರ್ ಜಾರಿಗೆ ತಂದಿರುವ ದಂಡನಾತ್ಮಕ ಕ್ರಮಗಳ ವಿರುದ್ಧ ಇಸ್ರೇಲ್ ಜೈಲಿನಲ್ಲಿರುವ ಫೆಲೆಸ್ತೀನ್ ಕೈದಿಗಳು ಪ್ರತಿಭಟನಾ ಅಭಿಯಾನ ಆರಂಭಿಸಿರುವುದಾಗಿ ವರದಿಯಾಗಿದೆ.
ಜೈಲಿನಲ್ಲಿ ಕ್ಯಾಂಟೀನ್ ಮುಚ್ಚುಗಡೆ ಹಾಗೂ ಇತರ ಸೌಲಭ್ಯಗಳನ್ನು ಕಡಿತಗೊಳಿಸುವ ಮೂಲಕ ಫೆಲಸ್ತೀನ್ ಕೈದಿಗಳ ವಿರುದ್ಧ ಸಾಮೂಹಿಕ ಶಿಕ್ಷೆಯ ಕ್ರಮವನ್ನು ಜಾರಿಗೆ ತರುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ಭುಗಿಲೆದ್ದಿದೆ. ಜೈಲಿನಲ್ಲಿ ಜಾರಿಗೊಳಿಸಿರುವ ಹೊಸ ನಿಯಮದಂತೆ, ತಮ್ಮ ಕೋಣೆಯಿಂದ ಹೊರಬರುವ, ಜೈಲಿನ ಕ್ಲಿನಿಕ್ ಗೆ ತೆರಳಬೇಕಿದ್ದರೂ ಕೈದಿಗಳ ಕೈಗೆ ಕೋಳ ತೊಡಿಸಲಾಗುವುದು. ಬಿಸಿನೀರಲ್ಲಿ ಸ್ನಾನ ಮಾಡಲು 3 ನಿಮಿಷದ ಸಮಯದ ಮಿತಿ ವಿಧಿಸಲಾಗಿದೆ. ಬೆಳಗ್ಗಿನ ಕ್ರೀಡೆಗಳನ್ನು ಸ್ಥಗಿತಗೊಳಿಸಲಾಗಿದೆ. ತಿಂಗಳಿಗೊಮ್ಮೆ ಕುಟುಂಬದ ಭೇಟಿಗೂ ಮತ್ತಷ್ಟು ನಿರ್ಬಂಧ ವಿಧಿಸಲಾಗಿದೆ. ಕೈದಿಗಳಿಗೆ ದಿನಾ ಬ್ರೆಡ್ ಒದಗಿಸುವುದನ್ನು ನಿಲ್ಲಿಸುವಂತೆ ಕಳೆದ ವಾರ ಬೆನ್ ಗ್ವಿರ್ ಆದೇಶಿಸಿದ್ದರು.
ಈ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ, ತಕ್ಷಣ ಅಸಹಕಾರ ಅಭಿಯಾನ ಮತ್ತು ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ `ಸುಪ್ರೀಂ ಎಮರ್ಜೆನ್ಸಿ ಕಮಿಟಿ ಫಾರ್ ಪ್ರಿಸನರ್ಸ್' ಘೋಷಿಸಿದೆ.