ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ’ಕ್ಕೆ ತೆರೆ

ಬೆಂಗಳೂರು, ಫೆ.17: ಯಲಹಂಕದ ವಾಯುಸೇನಾ ನೆಲೆಯಲ್ಲಿ ಫೆ.13ರಿಂದ ಆರಂಭಗೊಂಡಿದ್ದ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2023’ಕ್ಕೆ ಶುಕ್ರವಾರ ವಿದ್ಯುಕ್ತ ತೆರೆ ಬಿತ್ತು. ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವ 14ನೆ ಆವೃತ್ತಿಯ ಈ ವೈಮಾನಿಕ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತದ ಪರಿಕಲ್ಪನೆಯೊಂದಿಗೆ ನಡೆದ ಈ ವೈಮಾನಿಕ ಪ್ರದರ್ಶನದಲ್ಲಿ ಬಾನಂಗಳದಲ್ಲಿ ನಡೆದ ಲೋಹದ ಹಕ್ಕಿಗಳ ಚಿತ್ತಾರ, ಮೈನವಿರೇಳಿಸುವ ಯುದ್ಧ ವಿಮಾನಗಳ ಸಾಹಸ, ಎಲ್‍ಸಿಎ ತೇಜಸ್, ಸೂರ್ಯಕಿರಣ್‍ನ ಸಾಹಸ, ಸಾರಂಗ್ ಹಾಗೂ ಪ್ರಚಂಡ್ ಹೆಲಿಕಾಪ್ಟರ್‍ಗಳ ನರ್ತನ, ಡಕೋಟ, ಸುಖೋಯ್, ಮಿಗ್ ವಿಮಾನಗಳ ಹಾರಾಟ ಪ್ರೇಕ್ಷಕರ ಮನರಂಜಿಸಿತು. ಮತ್ತೊಂದೆಡೆ ಸ್ವದೇಶಿ ಯುದ್ಧ ವಿಮಾನ, ಕಾಂಬಾಟ್ ಹೆಲಿಕಾಪ್ಟರ್ ಸೇರಿದಂತೆ ರಕ್ಷಣಾ ವಲಯದ ಹಲವು ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ಗಮನಸೆಳೆಯಿತು.
ಕೋವಿಡ್ ಸಾಂಕ್ರಮಿಕದ ಬಳಿಕ ನಡೆದ ಈ ವೈಮಾನಿಕ ಪ್ರದರ್ಶನದಲ್ಲಿ ಅಮೆರಿಕ, ರಷ್ಯಾ, ಫ್ರಾನ್ಸ್, ಆಫ್ರಿಕಾ, ಇಂಡೋನೇಷಿಯಾ, ಸೌದಿ ಅರೇಬಿಯಾ, ಜಪಾನ್ ಸೇರಿದಂತೆ ವಿಶ್ವದ 100 ರಾಷ್ಟ್ರಗಳು, ದೇಶ, ವಿದೇಶದ 700ಕ್ಕೂ ಹೆಚ್ಚು ಪ್ರದರ್ಶಕರು, ನವೋದ್ಯಮಗಳು ಭಾಗವಹಿಸಿದ್ದವು. ಮಿತ್ರ ದೇಶಗಳ ರಕ್ಷಣಾ ಸಚಿವರ ಸಮಾವೇಶ ಹಾಗೂ ರಕ್ಷಣಾ ಉತ್ಪನ್ನಗಳ ತಯಾರಕ ಸಂಸ್ಥೆಗಳ ಸಿಇಒಗಳೊಂದಿಗೆ ನಡೆದ ದುಂಡುಮೇಜಿನ ಸಭೆಯು ಭಾರತದ ರಕ್ಷಣಾ ವಲಯಕ್ಕೆ ಹೊಸ ನಾಂದಿ ಹಾಡಿತು.
ಇಂಡಿಯಾ ಪೆವಿಲಿಯನ್, ಕರ್ನಾಟಕ ಪೆವಿಲಿಯನ್ ಸೇರಿದಂತೆ ಎಚ್.ಎ.ಎಲ್, ಕೇಂದ್ರ ರಕ್ಷಣಾ ಸಚಿವಾಲಯ, ಡಸಾಲ್ಟ್ ಏವಿಯೇಷನ್ಸ್ ಸೇರಿದಂತೆ ವಿವಿಧ ಪ್ರದರ್ಶನ ಮಳಿಗೆಗಳಿಗೆ ಪಾಸ್ ಪಡೆದಿದ್ದ ಸಾರ್ವಜನಿಕರು ಭೇಟಿ ನೀಡಿ, ವೈಮಾನಿಕ ಕ್ಷೇತ್ರದ ಸಂಶೋಧನೆಗಳು, ಯುದ್ಧ ವಿಮಾನಗಳ ಹಾಗೂ ಯುದ್ಧ ಸಾಮಗ್ರಿಗಳ ವಿವರ ಪಡೆದುಕೊಂಡರು.
ರಕ್ಷಣಾ ವಲಯದಲ್ಲಿನ ಹಲವಾರು ನವೋದ್ಯಮಗಳು ಈ ವೇಳೆ ಗಮನ ಸೆಳೆದವು. ಕಳೆದ ಐದು ದಿನಗಳಿಂದಲೂ ನಡೆದ ಈ ವೈಮಾನಿಕ ಪ್ರದರ್ಶನ, ರಕ್ಷಣಾ ವಲಯಕ್ಕೆ ಸಂಬಂಧಿಸಿದ ಒಡಂಬಡಿಕೆಗಳು ಸೇರಿ ಹಲವು ಮಹತ್ವದ ಕಾರ್ಯಚಟುವಟಿಕೆಗಳು ಸಾಕ್ಷಿಯಾಯಿತು. ಅಲ್ಲದೆ, ಮುಂದಿನ 15ನೇ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು 2025ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲೆ ಆಯೋಜಿಸಲು ಉದ್ದೇಶಿಸಲಾಗಿದೆ.
ವೈಮಾನಿಕ ಪ್ರದರ್ಶನದ ವೇಳೆ ನಡೆದಂತ ಬಿ2ಬಿ ಸಭೆಗಳಲ್ಲಿ ಸುಮಾರು 80 ಸಾವಿರ ಕೋಟಿ ರೂ. ಗಳ ವಿವಿಧ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಯುದ್ಧ ವಿಮಾನಗಳ ಖರೀದಿ, ನಿರ್ಮಾಣ, ಯುದ್ಧ ವಿಮಾನಗಳ ಬಿಡಿ ಭಾಗಗಳ ಉತ್ಪಾದನೆ, ಡ್ರೋನ್ ಅಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ಕಂಪನಿಗಳ ನಡುವೆ ಒಪ್ಪಂದಗಳು ಏರ್ಪಟ್ಟಿವೆ.
ವೈಮಾನಿಕ ಪ್ರದರ್ಶನದ ಕೊನೆಯ ದಿನವಾದ ಇಂದು ಬೆಳಗ್ಗೆಯಿಂದಲೆ ಯಲಹಂಕ ವಾಯುನೆಲೆಯತ್ತ ಸಾರ್ವಜನಿಕರು, ವಿದ್ಯಾರ್ಥಿಗಳು, ಸೇನಾ ಸಿಬ್ಬಂದಿಗಳು, ಅಧಿಕಾರಿಗಳ ಕುಟುಂಬ ಸದಸ್ಯರು ತಂಡೋಪ ತಂಡವಾಗಿ ಧಾವಿಸಿದರು. ಒಟ್ಟು ಐದು ದಿನಗಳ ಕಾಲ ನಡೆದ ಈ ಪ್ರದರ್ಶನಕ್ಕೆ ಸುಮಾರು 3 ಲಕ್ಷ ಮಂದಿ ಸಾಕ್ಷಿಯಾದರು. ರನ್‍ವೇ ಹಾಗೂ ಪ್ರದರ್ಶನ ಮಳಿಗೆಗಳಲ್ಲಿ ಇರಿಸಲಾಗಿದ್ದ ಯುದ್ಧ ವಿಮಾನಗಳ ಜೊತೆಗೆ ಸೆಲ್ಫಿ ಪಡೆಯಲು ಸಾರ್ವಜನಿಕರು ಮುಗಿ ಬಿದ್ದರು.
ರಸ್ತೆಯ ಬದಿ, ಕೆರೆಯ ಏರಿ ಮೇಲೂ ಜನ:
ವೈಮಾನಿಕ ಪ್ರದರ್ಶನ ವೀಕ್ಷಿಸಲು ಟಿಕೆಟ್ ಹಾಗೂ ಪಾಸ್ ಸಿಗದವರು ದೇವನಹಳ್ಳಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಹುಣಸಮಾರನಹಳ್ಳಿಯ ಕೆರೆಯ ಏರಿ ಮೇಲೆ ಹಾಗೂ ಹೆದ್ದಾರಿಯ ಇಕ್ಕೆಲಗಳಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಯುದ್ಧ ವಿಮಾನಗಳ ರೋಮಾಂಚಕ ಪ್ರದರ್ಶನವನ್ನು ಕಣ್ಣು ತುಂಬಿಕೊಂಡರು. ಇದರಿಂದಾಗಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗಟ್ಟಲೆ ಸಂಚಾರದಟ್ಟಣೆ ಉಂಟಾಗಿ, ವಿಮಾನ ನಿಲ್ದಾಣ ಸೇರಿದಂತೆ ಚಿಕ್ಕಬಳ್ಳಾಪುರ, ಹಿಂದುಪುರದ ಕಡೆ ತೆರಳುತ್ತಿದ್ದ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿತ್ತು.







