ಬಿಜೆಪಿಯ 'ಭರವಸೆಯ' ಪೋಸ್ಟರ್ ಗಳ ಮೇಲೆ 'ಕಿವಿ ಮೇಲೆ ಹೂವು' ಪೋಸ್ಟರ್ ಪ್ರತ್ಯಕ್ಷ

ಬೆಂಗಳೂರು, ಫೆ.17: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷ ಕಾಂಗ್ರೆಸ್ 'ಕಿವಿ ಮೇಲೆ ಹೂವು' ಅಭಿಯಾನ ಮುಂದುವರಿಸಿದ್ದು, ಬಿಜೆಪಿ ಸಾಧನೆಗಳ ‘ಬಿಜೆಪಿಯೇ ಭರವಸೆ’ ಪೋಸ್ಟರ್‌ಗಳ ಮೇಲೆ ''ಸಾಕಪ್ಪ ಸಾಕು! ಕಿವಿ ಮೇಲೆ ಹೂವ'' ಎಂಬ ಪೋಸ್ಟರ್ ಗಳನ್ನ ಕಾಂಗ್ರೆಸ್ ಕಾರ್ಯಕರ್ತರು ಅಂಟಿಸಿ, ಆಕ್ರೋಶ ಹೊರ ಹಾಕಿದ್ದಾರೆ.
ಮಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಸರಕಾರದ ಸಾಧನೆಗಳನ್ನು ವಿವರಿಸುವ ಪೋಸ್ಟರ್‌ಗಳನ್ನು ಹಾಕಿದ್ದರು. ಇದೀಗ ರಾತ್ರೋ ರಾತ್ರಿ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್‌ಗಳ ಮೇಲೆ ''ಸಾಕಪ್ಪ ಸಾಕು! ಕಿವಿ ಮೇಲೆ ಹೂವ'' ಎಂದು ಬರೆಯುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯ ಬಜೆಟ್ 2023 | 'ಕಿವಿ ಮೇಲೆ ಹೂವು' ಅಭಿಯಾನ ಆರಂಭಿಸಿದ ಕಾಂಗ್ರೆಸ್
''ಸುಳ್ಳು ಭರವಸೆಯ ಬಜೆಟ್''
'ಪ್ರಣಾಳಿಕೆ ಮತ್ತು ಕಳೆದ ಬಜೆಟ್ ನ 10% ಭರವಸೆಗಳನ್ನೂ ಈಡೇರಿಸದ ಬಿಜೆಪಿ ಮತ್ತೊಂದು ಸುಳ್ಳು ಭರವಸೆಯ ಬಜೆಟ್ ಮೂಲಕ ಜನತೆಯ ಕಿವಿ ಮೇಲೆ ಮತ್ತೊಂದು ಹೂವು ಇಟ್ಟಿದೆ' ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಅಲ್ಲದೇ, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲೂ ಕೂಡ #KiviMeleHoova ಹ್ಯಾಶ್ ಟ್ಯಾಗ್ ನಡಿಯಲ್ಲಿ ಅಭಿಯಾನ ನಡೆಸಿರುವ ಕಾಂಗ್ರೆಸ್, ' ವಿವಿಧ ಸಮುದಾಯಗಳ ಮೀಸಲಾತಿ ಹೆಚ್ಚಳದ ಭರವಸೆ ನೀಡಿತ್ತು ಬಿಜೆಪಿ. ಆದರೆ ಆ ನಿಟ್ಟಿನಲ್ಲಿ ಸಣ್ಣ ಪ್ರಯತ್ನವನ್ನೂ ಮಾಡದೆ ಜನರ ಕಿವಿ ಮೇಲೆ ಹೂವಿಟ್ಟಿದೆ. ಹೀಗಿರುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಂಡಲ್ ಬಜೆಟ್ ನಂಬಿಕೆಗೆ ಅರ್ಹವೇ?' ಎಂದು ಪ್ರಶ್ನೆ ಮಾಡಿದೆ.






.jpeg)



