ಪರಿಶಿಷ್ಟರ ಕಲ್ಯಾಣಕ್ಕೆ 30,215 ಕೋಟಿ ರೂ.ಅನುದಾನ: ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು, ಫೆ. 17: ‘ರಾಜ್ಯದಲ್ಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭ್ಯುದಯಕ್ಕೆ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಒಟ್ಟು 30,215 ಕೋಟಿ ರೂ. ಒದಗಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಕಟಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಆಯವ್ಯಯ ಮಂಡನೆ ಮಾಡಿದ ಅವರು, 2023-24ನೇ ಸಾಲಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಸತಿ ಯೋಜನೆಗಳಲ್ಲಿ ಘಟಕ ಸಹಾಯಧನ 1.75ಲಕ್ಷ ರೂ.ಗಳಿಂದ 2ಲಕ್ಷ ರೂ. ಗಳಿಗೆ ಹೆಚ್ಚಳ, ಭೂ ಒಡೆತನ ಯೋಜನೆಯಡಿ ಘಟಕ ವೆಚ್ಚದ ಮೊತ್ತ 15ಲಕ್ಷ ರೂ.ಗಳಿಂದ 20ಲಕ್ಷ ರೂ.ಗಳಿಗೆ ಏರಿಕೆ, ಮೊದಲ ಬಾರಿಗೆ ಎಸ್ಸಿ-ಎಸ್ಟಿ ಯುವಕರು ಸ್ವಯಂಉದ್ಯೋಗ ಕೈಗೊಳ್ಳಲು ವಿದ್ಯುತ್ ಚಾಲಿತ ತ್ರಿಚಕ್ರ ಸರಕು ವಾಹನ ಖರೀದಿಗೆ 50ಸಾವಿರ ರೂ. ಧನ ಸಹಾಯ ನೀಡಲಾಗುವುದು ಎಂದು ತಿಳಿಸಿದರು.
‘ರಾಜ್ಯದಲ್ಲಿ ಗಂಗಾ ಕಲ್ಯಾಣ ಯೋಜನೆಯ ಅನುಷ್ಠಾನಗೊಳಿಸಿ ನೇರವಾಗಿ ಫಲಾನುಭವಿಗಳಿಗೆ ಹಣ ಪಾವತಿ, ಮೆಟ್ರಿಕ್ ನಂತರದಲ್ಲಿ ಶಾಲೆಯಿಂದ ಹೊರಗುಳಿಯುವಂತಹ ಎಸ್ಸಿ-ಎಸ್ಟಿ ಸಮುದಾಯದ ವಿದ್ಯಾರ್ಥಿಗಳ ಸಂಖ್ಯೆಯನ್ನು ತಗ್ಗಿಸಲು 100 ಕ್ರೈಸ್ ವಸತಿ ಶಾಲೆಗಳನ್ನು ಉನ್ನತೀಕರಿಸಿ ಪದವಿ ಪೂರ್ವ ಶಿಕ್ಷಣ ಪ್ರಾರಂಭ. ಎಸ್ಸಿ-ಎಸ್ಟಿ ಸಮುದಾಯದ ಗುತ್ತಿಗೆದಾರರಿಗೆ 50ಲಕ್ಷ ರೂ.ಗಳ ವರೆಗಿನ ಸಣ್ಣ ಕಾಮಗಾರಿಗಳಲ್ಲಿ ಶೇ.24ರ ವರೆಗೆ ಮೀಸಲಾತಿ ನಿಗದಿಪಡಿಸಿದ್ದು, ಈ ಮೊತ್ತ 1ಕೋಟಿ ರೂ.ವರೆಗೆ ಹೆಚ್ಚಳ ಮಾಡಲಾಗುವುದು ಎಂದು ಹೇಳಿದರು.
‘ವಸತಿ ಶಾಲೆಗಳಲ್ಲಿನ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಎಸ್ಸಿ-ಎಸ್ಟಿ ಸಮುದಾಯದ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಒಟ್ಟು 10 ಕ್ರೈಸ್ ವಸತಿ ಶಾಲೆಗಳಲ್ಲಿ, ಒಂದು ಶಾಲೆಗೆ ಒಂದರಂತೆ, ಉತ್ಕøಷ್ಟ ಮಟ್ಟದ ಕ್ರೀಡಾ ಸೌಲಭ್ಯಕ್ಕಾಗಿ 10 ಕೋಟಿ ರೂ., ಪರಿಶಿಷ್ಟ ಪಂಗಡದ ಮಕ್ಕಳಿಗೆ ವಿದ್ಯಾರ್ಥಿ ನಿಲಯಗಳು ಇಲ್ಲದೆ ಇರುವ ಜಿಲ್ಲಾ ಕೇಂದ್ರಗಳಲ್ಲಿ 14 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು 6ಕೋಟಿ ರೂ.ವೆಚ್ಚದಲ್ಲಿ ಪ್ರಾರಂಭ ಮಾಡಲಾಗುವುದು ಎಂದು ಹೇಳಿದರು.
‘ಐಎಸ್‍ಇಸಿ ಸಂಸ್ಥೆಯಲ್ಲಿ ಪಿಎಚ್‍ಡಿ ಮಾಡುವ 5ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಫೆಲೋಶಿಪ್ ನೀಡಲು 2 ಕೋಟಿ ರೂ.ಕಾರ್ಪಸ್ ನಿಧಿ ಸ್ಥಾಪನೆ, ಎಸ್ಸಿ-ಎಸ್ಟಿ ಸಮುದಾಯದ ನಿರುದ್ಯೋಗಿಗಳಿಗೆ ವಿವಿಧ ಆದಾಯ ಬರುವ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ವಾಣಿಜ್ಯ ಬ್ಯಾಂಕ್‍ಗಳಿಂದ ಪಡೆಯುವ ಗರಿಷ್ಠ 10ಲಕ್ಷ ರೂ.ವರೆಗಿನ ಸಾಲ ಶೇ.4ರಷ್ಟು ಬಡ್ಡಿ ದರದಲ್ಲಿ ದೊರಕಿಸಲು ಸರಕಾರ ವತಿಯಿಂದ ಬಡ್ಡಿ ಸಹಾಯಧನ ನೀಡಲಾಗುವುದು ಎಂದರು.
ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ 10ಸಾವಿರ ಯುವ ಜನರು ಭಾರತೀಯ ಸೇನೆಯಲ್ಲಿ ಅಗ್ನಿವೀರರಾಗಿ ನೇಮಕಾತಿ ಹೊಂದಲು ಉಚಿತ ತರಬೇತಿ, ಸಫಾಯಿ ಕರ್ಮಚಾರಿಗಳಿಗೆ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ವಸತಿ ಸೌಲಭ್ಯ, ಎಸ್ಸಿ-ಎಸ್ಟಿಗೆ ಸೇರಿದ ವಿವಿಧ 6 ಅಭಿವೃದ್ಧಿ ನಿಗಮಗಳಿಗೆ ಪ್ರಸಕ್ತ ಸಾಲಿನಲ್ಲಿ 795 ಕೋಟಿ ರೂ.ಒದಗಿಸಲಾಗುವುದು ಎಂದು ನುಡಿದರು.







