ಮಾತೃಭಾಷೆಯಲ್ಲೇ ಬೋಧನೆ, ಕಲಿಕಾ ಸಾಮಗ್ರಿ: ಯುಜಿಸಿ ಸೂಚನೆ

ಹೊಸದಿಲ್ಲಿ: ಆಯಾ ರಾಜ್ಯಗಳ ಉನ್ನತ ಶಿಕ್ಷಣ ಸಂಸ್ಥೆಗಳು ಮಾತೃಭಾಷೆಯಲ್ಲಿ ಬೋಧನೆ ಮಾಡಲು ಮತ್ತು ಪಠ್ಯಪುಸ್ತಕಗಳನ್ನು ಸಿದ್ಧಪಡಿಸಲು ಉತ್ತೇಜನ ನೀಡುವಂತೆ ಸೂಚಿಸಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
"ಭಾರತೀಯ ಭಾಷೆಗಳಲ್ಲಿ ಬೋಧನೆ ಮಾಡುವುದು ರಾಷ್ಟ್ರೀಯ ಶಿಕ್ಷಣ ನೀತಿ-2020ರ ಪ್ರಮುಖ ಅಂಶವಾಗಿದೆ. ಮಾತೃಭಾಷೆಯಲ್ಲಿ ಬೋಧನೆ ಮತ್ತು ಬೋಧನಾ ಸಾಮಗ್ರಿಗಳನ್ನು ನೀಡಲು ಹೊಸ ಶಿಕ್ಷಣ ನೀತಿ ಒತ್ತು ನೀಡಿದೆ. ನಮ್ಮ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಮಾತೃಭಾಷೆಯಲ್ಲಿ ಪಠ್ಯ ಮತ್ತು ಸ್ಥಳೀಯ ಭಾಷೆಗಳಲ್ಲಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿ ಬಳಸುವುದು ಹೃದಯಕ್ಕೆ ಹತ್ತಿರವಾಗುತ್ತದೆ" ಎಂದು ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ಪತ್ರದಲ್ಲಿ ವಿವರಿಸಿದ್ದಾರೆ.
ಹಲವು ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಸಮಾಜ ವಿಜ್ಞಾನ, ವಾಣಿಜ್ಯ ಹಾಗೂ ವಿಜ್ಞಾನವನ್ನು ಮಾತೃಭಾಷೆಯಲ್ಲಿ ಮತ್ತು ಸ್ಥಳೀಯ ಭಾಷೆಯಲ್ಲಿ ಬೋಧನೆ ಮಾಡುತ್ತಿವೆ. ಇದು ಸಮಾಜದ ಎಲ್ಲ ಸ್ತರಗಳ ವಿದ್ಯಾರ್ಥಿಗಳಿಗೆ, ಅದರಲ್ಲೂ ಮುಖ್ಯವಾಗಿ ಸೌಲಭ್ಯ ವಂಚಿತ ವರ್ಗಗಳಿಗೆ ಮತ್ತು ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶದ ಮಕ್ಕಳಿಗೆ ತೀರಾ ಸಹಕಾರಿ" ಎಂದು ಬಣ್ಣಿಸಿದ್ದಾರೆ.
ಆದಾಗ್ಯೂ ವಿಜ್ಞಾನ, ವಾಣಿಜ್ಯ ಮತ್ತು ವೃತ್ತಿಪರ ಕ್ಷೇತ್ರದ ಉನ್ನತ ಶಿಕ್ಷಣಕ್ಕೆ ಕಲಿಕಾ ಸಾಮಗ್ರಿಗಳ ಮತ್ತು ಪಠ್ಯಪುಸ್ತಕಗಳು ಲಭ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಮಾತೃಭಾಷೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಅನುವಾಗುವಂತೆ ಮೊದಲ ಹಂತದಲ್ಲಿ ಪಠ್ಯಪುಸ್ತಕಗಳನ್ನು ಮಾತೃಭಾಷೆಯಲ್ಲಿ ಸಿದ್ಧಪಡಿಸಬೇಕು ಎಂದು ಸಲಹೆ ಮಾಡಿದ್ದಾರೆ.







