ಉತ್ತರ ಪ್ರದೇಶದ 22 ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿ ವೇತನದ ಅಕ್ರಮ ವರ್ಗಾವಣೆ: ಈಡಿ

ಹೊಸದಿಲ್ಲಿ: ಆರ್ಥಿಕ ದುರ್ಬಲರು, ಅಲ್ಪಸಂಖ್ಯಾತ ವರ್ಗದವರು ಹಾಗೂ ವಿಶೇಷಚೇತನ ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟಿದ್ದ ಸುಮಾರು ರೂ. 75 ಕೋಟಿ ನಿಧಿಯನ್ನು ಉತ್ತರ ಪ್ರದೇಶದ ಕೆಲವು ಶಿಕ್ಷಣ ಸಂಸ್ಥೆಗಳು ದುರ್ಬಳಕೆ ಮಾಡಿಕೊಂಡಿರುವ ಸಂಗತಿಯನ್ನು ಜಾರಿ ನಿರ್ದೇಶನಾಲಯ ಪತ್ತೆ ಹಚ್ಚಿದೆ ಎಂದು ndtv.com ವರದಿ ಮಾಡಿದೆ.
ರಾಜ್ಯದ ಹಲವಾರು ಶಿಕ್ಷಣ ಸಂಸ್ಥೆಗಳು ಮೆಟ್ರಿಕೋತ್ತರ ವಿದ್ಯಾರ್ಥಿ ವೇತನವನ್ನು ಅಕ್ರಮವಾಗಿ ಪಡೆದುಕೊಂಡಿವೆ ಎಂಬ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ದೂರನ್ನು ಆಧರಿಸಿ ಫೆ. 16ರಂದು ಕೇಂದ್ರೀಯ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯವು ಉತ್ತರ ಪ್ರದೇಶದ ಆರು ಜಿಲ್ಲೆಗಳ 22 ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿತ್ತು. ಈ ದೂರನ್ನು 2017ರಲ್ಲಿ ರಾಜ್ಯ ವಿಚಕ್ಷಣಾ ದಳವು ಸಲ್ಲಿಸಿತ್ತು.
ಈ ಕುರಿತು ಪ್ರಕಟಣೆ ನೀಡಿರುವ ಜಾರಿ ನಿರ್ದೇಶನಾಲಯವು, ತಾನು ಶೋಧಿಸಿದ ಶಿಕ್ಷಣ ಸಂಸ್ಥೆಗಳ ಪೈಕಿ ಲಕ್ನೊದ ಮಾಂಪುರದಲ್ಲಿನ ಎಸ್.ಎಸ್. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಲಕ್ನೊದ ಹೈಜಿಯ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸಿ/ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸಿ, ಲಕ್ನೊದ ಲಕ್ನೊ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಎಜುಕೇಶನ್, ಫರೂಖಾಬಾದ್‌ನ ಡಾ. ಓಂ ಪ್ರಕಾಶ್ ಗುಪ್ತಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಟೆಕ್ನಾಲಜಿ ಸೇರಿವೆ ಎಂದು ತಿಳಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ತನಿಖೆಗೊಳಪಟ್ಟಿರುವ ಶಿಕ್ಷಣ ಸಂಸ್ಥೆಗಳ ಪೈಕಿ ಹರ್ದೋಯಿಯ ಡಾ. ಭೀಮ್ ರಾವ್ ಅಂಬೇಡ್ಕರ್ ಫೌಂಡೇಶನ್ ಆ್ಯಂಡ್ ಜೀವಿಕಾ ಕಾಲೇಜ್ ಆಫ್ ಫಾರ್ಮಸಿ, ಆರ್.ಪಿ. ಇಂಟರ್ ಕಾಲೇಜ್ ಮತ್ತು ಜಗದೀಶ್ ಪ್ರಸಾದ್ ವರ್ಮ ಉಚಾತರ್ ಮಾಧ್ಯಮಿಕ್ ವಿದ್ಯಾಲಯ ಕೂಡಾ ಸೇರಿವೆ ಎಂದು ಹೇಳಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಶೇಷಚೇತನ, ಅಲ್ಪಸಂಖ್ಯಾತ ಹಾಗೂ ಆರ್ಥಿಕ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ನೆರವು ನೀಡಲು ವಿದ್ಯಾರ್ಥಿ ವೇತನ ಒದಗಿಸಲಾಗುತ್ತಿತ್ತು ಎಂದು ತಿಳಿಸಿರುವ ಜಾರಿ ನಿರ್ದೇಶನಾಲಯವು, ವಿದ್ಯಾರ್ಥಿ ವೇತನ ಹಗರಣದಿಂದ ಸಮಾಜದ ದುರ್ಬಲ ವರ್ಗಗಳ ಮೇಲೆ ಭಾರಿ ದುಷ್ಪರಿಣಾಮವುಂಟಾಗಿದೆ ಎಂದು ಹೇಳಿದೆ.
ಈ ಹಗರಣವನ್ನು ಸಂಚಿತ ನಿಧಿಯೊಂದಿಗೆ ಫಿನೊ ಫೇಮೆಂಟ್ಸ್ ಬ್ಯಾಂಕಿನ ಹಲವು ಏಜೆಂಟರ ನೆರವಿನೊಂದಿಗೆ ಎಸಗಲಾಗಿದ್ದು, ಈ ಹಗರಣದಲ್ಲಿ ಮುಹಮ್ಮದ್ ಸಾಹಿಲ್ ಅಝೀಝ್, ಅಮಿತ್ ಕುಮಾರ್ ಮೌರ್ಯ, ತನ್ವೀರ್ ಅಹ್ಮದ್, ಜಿತೇಂದ್ರ ಸಿಂಗ್ ಮತ್ತು ರವಿ ಪ್ರಕಾಶ್ ಗುಪ್ತ ಎಂಬುವವರು ಭಾಗಿಯಾಗಿದ್ದಾರೆ ಎಂದು ತಿಳಿಸಿದೆ.
ಈ ಹಗರಣವನ್ನು ಫಿನೋ ಪೇಮೆಂಟ್ಸ್ ಬ್ಯಾಂಕ್‌ನ ವೇದಿಕೆಯಲ್ಲಿ ಖಾತೆ ತೆರೆಯಲು ಒದಗಿಸಲಾಗಿದ್ದ ವಿನಾಯಿತಿ ಕ್ರಮವನ್ನು ಬಳಸಿಕೊಂಡು ಎಸಗಲಾಗಿದೆ ಎಂದು ಅದು ಹೇಳಿದೆ.







