ರಾಹುಲ್ ಸಂಚರಿಸುತ್ತಿದ್ದ ವಿಮಾನ ಇಳಿಸಲು ನಿರಾಕರಣೆ ಎಂದು ಸುಳ್ಳು ಮಾಹಿತಿ: ಕಾಂಗ್ರೆಸ್ ನಾಯಕನ ವಿರುದ್ಧ ಪ್ರಕರಣ

ವಾರಣಾಸಿ: ಈ ವಾರದ ಆರಂಭದಲ್ಲಿ ರಾಹುಲ್ ಗಾಂಧಿ ಅವರ ವಿಮಾನವನ್ನು ವಾರಣಾಸಿಯಲ್ಲಿ ಇಳಿಸಲು ವಿಮಾನ ನಿಲ್ದಾಣದ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ಅಜಯ್ ರಾಯ್ ವಿರುದ್ಧ ಇಲ್ಲಿನ ಫುಲ್ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಬಬತ್‌ಪುರ ವಿಮಾನ ನಿಲ್ದಾಣದ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್ ಪಾಠಕ್ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಂಗಳವಾರ ರಾಹುಲ್ ಗಾಂಧಿ ಅವರ ವಿಮಾನ ಆಗಮನದ ಬಗ್ಗೆ ಮಾಹಿತಿ ಇತ್ತು ಆದರೆ ನಂತರ ಕಿನ್ನೌರ್‌ನ ಏರ್ ಟ್ರಾಫಿಕ್ ಕಂಟ್ರೋಲರ್‌ಗೆ ವಿಮಾನವು ಕೇರಳದ ಕಣ್ಣೂರಿನಿಂದ ಹಿಂತಿರುಗಿ ನೇರವಾಗಿ ದಿಲ್ಲಿಗೆ ಹೋಗಲಿದೆ ಎಂಬ ಸಂದೇಶವನ್ನು ಸ್ವೀಕರಿಸಿದೆ ಎಂದು ಪಾಠಕ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆ ದಿನ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದ ರಾಯ್ ಅವರು ರಾಹುಲ್ ಗಾಂಧಿ ಅವರ ವಿಮಾನಕ್ಕೆ ವಾರಣಾಸಿ ವಿಮಾನ ನಿಲ್ದಾಣದ ಅಧಿಕಾರಿಗಳು "ಕೊನೆಯ ಕ್ಷಣದಲ್ಲಿ" ಲ್ಯಾಂಡಿಂಗ್ ಅನುಮತಿ ನಿರಾಕರಿಸಿದರು, ಇದರಿಂದಾಗಿ ಅವರು ದಿಲ್ಲಿಗೆ ಹೋಗಬೇಕಾಯಿತು ಎಂದು ಆರೋಪಿಸಿದ್ದರು.





