ರಾಜ್ಯ ಸರಕಾರ ಮಂಡಿಸಿದ್ದು ಸುಲಿಗೆ, ಸಾಲದ ಬಜೆಟ್: ಯು.ಟಿ.ಖಾದರ್
"ಕರಾವಳಿಯ ಅಭಿವೃದ್ಧಿಗೆ ಅನುದಾನ ನೀಡಿದರೆ ಪ್ರಯೋಜನವಿಲ್ಲ ಎಂದು ನಳಿನ್ ಕುಮಾರ್ ಮುಖ್ಯಮಂತ್ರಿಗೆ ಹೇಳಿರಬೇಕು"

ಮಂಗಳೂರು, ಫೆ.18: ರಾಜ್ಯದ ಸಂಸದರ ಮೌನ, ಸರಕಾರದ ಅಸಹಾಯಕತೆ, ಕೇಂದ್ರ ಸರಕಾರದ ಮಲತಾಯಿ ಧೋರಣೆಯಿಂದಾಗಿ ರಾಜ್ಯದ ಜನತೆ ಸಾಲದ ಹೊರೆಯಲ್ಲಿ ಹೊತ್ತುಕೊಳ್ಳುವಂತಾಗಿದೆ. ರಾಜ್ಯ ಸರಕಾರ ಮಂಡಿಸಿದ್ದು ಸುಲಿಗೆ, ಸಾಲದ ಬಜೆಟ್ ಆಗಿದೆ ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊನೆಯ ಉಸಿರೆಳೆಯುತ್ತಿರುವ ಸರಕಾರ ಮಹತ್ವವಿಲ್ಲದ ಬಜೆಟ್ ಮಂಡಿಸಿದ್ದು, ಜನತೆಯನ್ನು ಸಾಲದಲ್ಲಿ ಮುಳುಗಿಸಿದೆ ಎಂದರು.
1947ರಿಂದ 2018ರ ತನಕ 2,42,000 ಕೋಟಿ ರೂ. ರಾಜ್ಯದ ಸಾಲದ ಇತ್ತು. ಈಗ ರಾಜ್ಯದ ಸಾಲ 5,63,816 ಕೋಟಿ ರೂ.ಗೆ ಮುಟ್ಟಿದೆ. ಕೇವಲ 4 ವರ್ಷಗಳಲ್ಲಿ ಬಿಜೆಪಿ ಸರಕಾರ 2,80,000 ಸಾಲ ಮಾಡಿದ್ದಾರೆ. ಇದೀಗ ಬಜೆಟ್‌ನಲ್ಲಿ 75,000 ಕೋಟಿ ರೂ. ಸಾಲ ಪಡೆಯುವ ಬಗ್ಗೆ ಪ್ರಕಟಿಸಲಾಗಿದೆ. ಈಗಿರುವ ಸಾಲಕ್ಕೆ ತಿಂಗಳಿಗೆ 14,000 ಕೋಟಿ ರೂ. ಅಸಲು ಮತ್ತು 34,000 ಕೋಟಿ ರೂ. ಬಡ್ಡಿ ಸೇರಿದಂತೆ 48,000 ಕೋಟಿ ರೂ. ಕಟ್ಟಬೇಕಾಗಿದೆ. ಹೀಗಿದ್ದರೂ ಸರಕಾರ ಸಾಲವನ್ನು ಕಡಿಮೆ ಮಾಡುವ ಬಗ್ಗೆ ಯೋಚಿಸಿಲ್ಲ. ಜಾತ್ರೆಯ ಉತ್ಸವ ಸಂದರ್ಭದಲ್ಲಿವ ಬ್ಯಾಂಡ್‌ನ ಸದ್ದಿನಂತಾಗಿದೆ ಎಂದು ಅಭಿಪ್ರಾಯಪಟ್ಟರು.
ದ.ಕ.ಜಿಲ್ಲೆಯ ಮೀನುಗಾರರನ್ನು ಸರಕಾರ ಕಡೆಗಣಿಸಿದೆ. ಮೀನುಗಾರರಿಗೆ ನೀಡಿರುವ ಭರವಸೆ ಈಡೇರಿಸಿಲ್ಲ. ಅವರಿಗೆ ಮೋಸ ಮಾಡಿದೆ. ಕಳೆದ ಸಲ 5,000 ಮನೆ ಕೊಡುವುದಾಗಿ ಹೇಳಿತ್ತು. ಆದರೆ 350 ಮನೆ ಸಿಕ್ಕಿತ್ತು. ಕರಾವಳಿ ಮೀನುಗಾರರಿಗೆ ಕೊಂಡಿ ರಸ್ತೆಗೆ ಅನುದಾನ ನೀಡಿಲ್ಲ. ಕಡಲ್ಕೊರೆತಕ್ಕೆ ತಾತ್ಕಾಲಿಕ ಮತ್ತು ಶಾಶ್ವತ ಪರಿಹಾರ ನೀಡುವ ಬಗ್ಗೆ ಬಜೆಟ್‌ನಲ್ಲಿ ಇಲ್ಲ. ಕೊಡಬೇಕಾದ ಸೀಮೆ ಎಣ್ಣೆ ಕೊಡುತ್ತಿಲ್ಲ. ಸೀಮೆ ಎಣ್ಣೆಯನ್ನು ಹಂತಹಂತವಾಗಿ ಕೊಡುವುದಾಗಿ ಬಜೆಟ್‌ನಲ್ಲಿ ಹೇಳಿದೆ. ಹಿಂದಿನ ಕಾಂಗ್ರೆಸ್ ಸರಕಾರ ತಿಂಗಳಿಗೆ 300 ಲೀಟರ್ ಡೀಸೆಲ್ ನೀಡಿತ್ತು. ಆದರೆ ಈಗಿನ ಸರಕಾರ ವಿಪಕ್ಷದ ಒತ್ತಾಯಕ್ಕೆ ಮಣಿದು 600 ಲೀಟರ್ ಡೀಸೆಲ್ ನೀಡಿದೆ ಎಂದರು.
ಎಲ್ಲರನ್ನು ಸರಕಾರ ಮತ್ತೆ ಮತ್ತೆ ಮೋಸ ಮಾಡುತ್ತಿದೆ. ಕೇಂದ್ರ ಸರಕಾರ ಉಳ್ಳಾಲದಲ್ಲಿ ಅಬ್ಬಕ್ಕ ಥೀಮ್ ಮಾಡುವುದಾಗಿ ಹೇಳಿದೆ. ಆದರೆ ಹೇಳಿದ್ದು ಮಾತ್ರ. ಬಜೆಟ್‌ನಲ್ಲಿ ಏನು ಇಲ್ಲ. ಕನಿಷ್ಠ ಮುಖ್ಯಮಂತ್ರಿಗೆ ಫೋನ್ ಮಾಡಿಯಾದರೂ ಅನುದಾನಕ್ಕೆ ಮನವಿ ಮಾಡಬಹುದಿತ್ತು. ಆದರೆ ಅದು ಮಾಡಿಲ್ಲ ಎಂದು ದೂರಿದರು.
ಕರಾವಳಿಯ ಅಭಿವೃದ್ಧಿಗೆ ಅನುದಾನ ನೀಡಿದರೆ ಪ್ರಯೋಜನವಿಲ್ಲ ಎಂದು ನಳಿನ್ ಕುಮಾರ್ ಕಟೀಲು ಮುಖ್ಯಮಂತ್ರಿಗೆ ಹೇಳಿರಬೇಕು. ಲವ್ ಜಿಹಾದ್, ಪಾಕಿಸ್ತಾನ, ಟಿಪ್ಪು, ಎಸ್‌ಡಿಪಿಐ, ಎಂಐಎಂ, ತಾಲಿಬಾನ್ ವಿಚಾರಗಳು ಬಿಜೆಪಿ ಸರಕಾರದ ಆಕ್ಸಿಜನ್ ಆಗಿದೆ. ಇದರಿಂದ ಸರಕಾರ ಉಳಿದಿದೆ ಎಂದು ವ್ಯಂಗ್ಯವಾಡಿದರು.
ಇಲ್ಲಿನ ಬಿಜೆಪಿ ಶಾಸಕರಿಗೆ ಕುಚಲಕ್ಕಿ ತರಲು ಸಾಧ್ಯವಾಗುವುದಿಲ್ಲ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಸಂತೋಷ್ ಕುಮಾರ್, ಸದಾಶಿವ ಉಳ್ಳಾಲ, ದೀಪಕ್ ಮತ್ತಿತರರು ಉಪಸ್ಥಿತರಿದ್ದರು.