ಭೂಕಂಪದ ಅವಶೇಷಗಳ ನಡುವೆ ಫುಟ್ಬಾಲ್ ಆಟಗಾರ ಕ್ರಿಶ್ಚಿಯನ್ ಅಟ್ಸು ಮೃತದೇಹ ಪತ್ತೆ

ಇಸ್ತಾಂಬುಲ್: ಟರ್ಕಿಯಲ್ಲಿ ಸಂಭವಿಸಿದ ಭಾರೀ ಭೂಕಂಪದ ನಂತರ ಘಾನಾದ ಮಾಜಿ ಅಂತರರಾಷ್ಟ್ರೀಯ ಫುಟ್ಬಾಲ್ ಆಟಗಾರ ಕ್ರಿಶ್ಚಿಯನ್ ಅಟ್ಸು ಅವರ ಮೃತದೇಹವು ಪತ್ತೆಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ಶನಿವಾರ ಅವರ ಮ್ಯಾನೇಜರ್ ಅನ್ನು ಉಲ್ಲೇಖಿಸಿ ವರದಿ ಮಾಡಿವೆ.
31 ವರ್ಷದ ಅಟ್ಸು ಅವರು ಫೆಬ್ರವರಿ 6 ರಂದು ಟರ್ಕಿ ಮತ್ತು ಸಿರಿಯಾವನ್ನು ಬೆಚ್ಚಿಬೀಳಿಸಿದ 7.8 ತೀವ್ರತೆಯ ಭೂಕಂಪದಲ್ಲಿ ಸಿಲುಕಿಕೊಂಡಿದ್ದರು. ಈ ಭೂಕಂಪದಲ್ಲಿ ಎರಡೂ ದೇಶಗಳಲ್ಲಿ 43,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಭೂಕಂಪದ ಒಂದು ದಿನದ ನಂತರ ಅವರನ್ನು ರಕ್ಷಿಸಲಾಗಿದೆ ಎಂದು ಪ್ರಾಥಮಿಕ ವರದಿಗಳಿತ್ತು. ಆದರೆ ಇದು ಸುಳ್ಳು ಎಂದು ತಿಳಿದುಬಂದಿದೆ.
ಟರ್ಕಿಯಲ್ಲಿನ ಅವರ ಮ್ಯಾನೇಜರ್ ಮುರಾತ್ ಉಝುನ್ಮೆಹ್ಮೆಟ್ ಅವರು ಶನಿವಾರ DHA ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದು, ಅವರ ದೇಹವು ಟರ್ಕಿಯ ದಕ್ಷಿಣ ಪ್ರಾಂತ್ಯದ ಹಟೇಯಲ್ಲಿ ಅವಶೇಷಗಳಡಿಯಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಮಿಡ್‌ಫೀಲ್ಡರ್ ಅಟ್ಸು 2017 ರಲ್ಲಿ ನ್ಯೂಕ್ಯಾಸಲ್‌ಗೆ ಶಾಶ್ವತ ವರ್ಗಾವಣೆಯ ಮೊದಲು ಚೆಲ್ಸಿಯಾದಲ್ಲಿ ನಾಲ್ಕು ಋತುಗಳನ್ನು ಕಳೆದಿದ್ದರು. ಅವರು ಸೆಪ್ಟೆಂಬರ್‌ನಲ್ಲಿ ಟರ್ಕಿಶ್ ಸೂಪರ್ ಲೀಗ್ ಸೈಡ್ ಹ್ಯಾಟೈಸ್‌ಪೋರ್‌ಗೆ ಸಹಿ ಹಾಕಿದ್ದರು.







