ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ನಾವು ಜೆಡಿಎಸ್ ಜೊತೆ ಕೈ ಜೋಡಿಸಿದರೂ ಪ್ರಯೋಜನವಾಗಲಿಲ್ಲ: ಸಿದ್ದರಾಮಯ್ಯ

ಯಲಬುರ್ಗಾ: ಸಮಾಜದಲ್ಲಿ ಜನ ಭಾವೈಕ್ಯದಿಂದ ಬಾಳುವುದು ಬಿಜೆಪಿಗೆ ಬೇಕಾಗಿಲ್ಲ. ಜನರ ನಡುವೆ ದ್ವೇಷ ಬಿತ್ತುವುದರಿಂದ ಚುನಾವಣೆಯಲ್ಲಿ ಮತಗಳು ಸಿಗುತ್ತವೆ ಎಂಬ ಭ್ರಮೆಯಲ್ಲಿ ಬಿಜೆಪಿಯಿದೆ (BJP) ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಯಲಬುರ್ಗಾದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೊಬ್ಬರ ಮೇಲೆ ವೈಯಕ್ತಿಕ ಸೇಡು ತೀರಿಸಿಕೊಳ್ಳಲೋ ಅಥವಾ ಸ್ವಾರ್ಥ ಸಾಧನೆಗಾಗಿ ರಾಜಕಾರಣ ಇಲ್ಲ. ಸಮಾಜಸೇವೆ ಮಾಡೋದೆ ರಾಜಕಾರಣದ ಮೂಲ ಉದ್ದೇಶ ಎಂದರು.
ಆದರೆ, ಬಿಜೆಪಿಯವರು ಸಮಾಜಸೇವೆ ಮಾಡುವ ರಾಜಕಾರಣದ ಮೂಲ ಉದ್ದೇಶವನ್ನು ಬಿಟ್ಟು, ರಾಜ್ಯವನ್ನು ಲೂಟಿ ಹೊಡೆಯುವುದರಲ್ಲಿ ತಲ್ಲೀನವಾಗಿದೆ. ಕೋಮುವಾದಿ ಬಿಜೆಪಿಯವರನ್ನು ಅಧಿಕಾರದಿಂದ ದೂರ ಇಡಲು ನಾವು ಜೆಡಿಎಸ್ ಜೊತೆ ಕೈ ಜೋಡಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ರಾಜ್ಯದ ಜನ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಭ್ರಮನಿರಸನರಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
'ಅಸ್ವಸ್ಥ ನಾರಾಯಣ': ಟಿಪ್ಪು ಸುಲ್ತಾನ್ ರೀತಿಯಲ್ಲಿಯೆ ನನ್ನನ್ನು ಹೊಡೆದು ಸಾಯಿಸಬೇಕು ಎಂದು ಹೇಳಿಕೆ ನೀಡಿರುವ ಸಚಿವ ಅಶ್ವತ್ಥನಾರಾಯಣ ಈಗ ಅಸ್ವಸ್ಥ ನಾರಾಯಣ ಆಗಿದ್ದಾರೆ. ಅವರಿಗೆ ಏನಾದರೂ ಮಾನಸಿಕ ಕಾಯಿಲೆ ಇರಬೇಕು. ಇಂತಹವರು ರಾಜಕೀಯದಲ್ಲಿರಲು ಲಾಯಕ್ಕಿಲ್ಲ. ಅವರನ್ನು ಸೋಲಿಸಿ ಮನೆಗೆ ಕಳುಹಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.
ರೈತರು, ದಲಿತರು, ಮಹಿಳೆಯರು, ಯುವಕರು, ಅಲ್ಪಸಂಖ್ಯಾತರು, ಬಡವರ ಬಗ್ಗೆ ಚರ್ಚೆ ಬಿಜೆಪಿಯವರು ಚರ್ಚೆ ಮಾಡುವುದಿಲ್ಲ. ಅದರ ಬದಲಾಗಿ ಇನ್ನೊಬ್ಬರನ್ನು ಹೊಡೆದು ಹಾಕುವ ಬಗ್ಗೆ ಮಾತನಾಡುತ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜನರಿಗೆ ರಸ್ತೆ, ಚರಂಡಿ, ಅಭಿವೃದ್ಧಿ ಕೆಲಸಗಳ ಬಗ್ಗೆ ಕೇಳಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಕರೆ ನೀಡುತ್ತಾರೆ. ಇಂತಹವರ ಸರಕಾರ ಅಧಿಕಾರದಲ್ಲಿ ಇರಬೇಕಾ? ಎಂದು ಅವರು ಪ್ರಶ್ನಿಸಿದರು.
ಮಾಜಿ ಸಚಿವ ಬಸವರಾಜರಾಯರಡ್ಡಿ ಕಳೆದ ಚುನಾವಣೆಯಲ್ಲಿ ಸೋತಿದ್ದು ಅಚ್ಚರಿ ತಂದಿದೆ. ಸಚಿವರಾಗಿ ರಾಜ್ಯದಲ್ಲಿ ತುಂಬಾ ಒಳ್ಳೆಯ ಕೆಲಸವನ್ನು ಮಾಡಿದವರ ಪೈಕಿ ಅವರು ಒಬ್ಬರು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದ್ದು, ಬಸವರಾಜರಾಯರಡ್ಡಿ ಮತ್ತೊಮ್ಮೆ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ಹೇಳಿದರು.









