ಸಿಂಗಾಪುರ ಉದ್ಯಮಿ ಬಂಧನ: ನ್ಯಾಯಾಲಯದಿಂದ ಈಡಿಗೆ ತರಾಟೆ

ಹೊಸದಿಲ್ಲಿ, ಫೆ. 18: ಯುಪಿಎ ಸರಕಾರದ ಕಾಲದಲ್ಲಿ ನಡೆದ ವಿಮಾನ ಒಪ್ಪಂದವೊಂದಕ್ಕೆ ಸಂಬಂಧಿಸಿ ಕೋಲ್ಕತಾ ವಿಮಾನ ನಿಲ್ದಾಣದಿಂದ ಸಿಂಗಾಪುರದ ಉದ್ಯಮಿಯೊಬ್ಬರನ್ನು ಬಂಧಿಸಿರುವುದಕ್ಕಾಗಿ ದಿಲ್ಲಿಯ ನ್ಯಾಯಾಲಯವೊಂದು ಅನುಷ್ಠಾನ ನಿರ್ದೇಶನಾಲಯ (ಈಡಿ)ವನ್ನು ತರಾಟೆಗೆ ತೆಗೆದುಕೊಂಡಿದೆ. ಬಂಧನಕ್ಕೆ ಮೊದಲು ಅನುಷ್ಠಾನ ನಿರ್ದೇಶನಾಲಯವು ನ್ಯಾಯಾಲಯದಿಂದ ಅನುಮೋದನೆ ಪಡೆದುಕೊಂಡಿಲ್ಲ, ಹಾಗಾಗಿ ಬಂಧನವು ‘‘ಅಸಮರ್ಥನೀಯ’’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಬಂಧನುವ ‘‘ಕಾನೂನುಬಾಹಿರ’’ವಾಗಿದೆ ಎಂದು ಹೇಳಿದ ದಿಲ್ಲಿಯ ರೋಸ್ ಅವೆನ್ಯೂನಲ್ಲಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅನಿಲ್ ಅಂತಿಲ್, ಉದ್ಯಮಿ ಇಂದರ್ ದೇವ್ ಭಲ್ಲಾಗೆ ಮಧ್ಯಂತರ ಜಾಮೀನು ನೀಡಿದರು.
ಭಲ್ಲಾರನ್ನು ಫೆಬ್ರವರಿ 13ರಂದು ನೇತಾಜಿ ಸುಭಾಶ್ ಚಂದ್ರ ಬೋಸ್ ಕೋಲ್ಕತಾ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಂಧಿಸಲಾಗಿತ್ತು.
ವಿಮಾನ ಒಪ್ಪಂದದಲ್ಲಿ ಲಭಿಸಿದ ಕಮಿಶನ್ ಹಣವನ್ನು ಬಿಳುಪು ಮಾಡಲು ಇಂಟರ್ದೇವ್ ಏವಿಯೇಶನ್ ಸರ್ವಿಸಸ್ ನಿರ್ದೇಶಕ ಭಲ್ಲಾ ಶೆಲ್ (ನಕಲಿ) ಕಂಪೆನಿಗಳನ್ನು ಸ್ಥಾಪಿಸಿದ್ದರು ಎಂದು ಅರೋಪಿಸಲಾಗಿದೆ.





