ಭಾರತೀಯ ವಿದೇಶಿ ವಿನಿಮಯ ಸಂಗ್ರಹ 69,000 ಕೋಟಿ ರೂ. ಕುಸಿತ

ಹೊಸದಿಲ್ಲಿ, ಫೆ. 18: ಫೆಬ್ರವರಿ 10ರಂದು ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 8.31 ಬಿಲಿಯನ್ ಡಾಲರ್ (ಸುಮಾರು 69,000 ಕೋಟಿ ರೂಪಾಯಿ)ನಷ್ಟು ಕುಸಿದು 566.94 ಬಿಲಿಯನ್ ಡಾಲರ್ (ಸುಮಾರು 46.92 ಲಕ್ಷ ಕೋಟಿ ರೂಪಾಯಿ) ಆಗಿತ್ತು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಅಂಕಿಅಂಶಗಳು ತಿಳಿಸಿವೆ. ಈ 8.31 ಶೇಕಡ ಕುಸಿತವು 11 ತಿಂಗಳ ಅವಧಿಯಲ್ಲೇ ಅತಿ ದೊಡ್ಡ ಕುಸಿತವಾಗಿದೆ.
ರೂಪಾಯಿ ಮೌಲ್ಯವು ಡಾಲರ್ ಗೆ 83ಕ್ಕಿಂತಲೂ ಕೆಳಗೆ ಕುಸಿಯುವುದನ್ನು ತಡೆಯುವ ಉದ್ದೇಶದಿಂದ ಆರ್ಬಿಐ ಡಾಲರ್ಗಳನ್ನು ಮಾರಾಟ ಮಾಡಿದೆ. ಅದರ ಸಂಭಾವ್ಯ ಪರಿಣಾಮ ಇದಾಗಿರಬಹುದು ಎನ್ನಲಾಗಿದೆ.
ಡಾಲರ್ ವಿರುದ್ಧ ರೂಪಾಯಿ ಮತ್ತಷ್ಟು ಕುಸಿಯುವುದನ್ನು ತಡೆಯಲು ಆರ್ಬಿಐ ಈ ವಾರ ನಾನ್ ಡೆಲಿವರಬಲ್ ಫಾರ್ವರ್ಡ್ (ಎನ್ಡಿಎಫ್) ಮಾರುಕಟ್ಟೆಯಲ್ಲಿ ಡಾಲರ್ಗಳನ್ನು ಮಾರಾಟ ಮಾಡಿರುವ ಸಾಧ್ಯತೆಯಿದೆ ಎಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ. ವಾರದಿಂದ ವಾರಕ್ಕೆ ನಿರ್ವಹಣೆಯ ಆಧಾರದಲ್ಲಿ ಹೆಳುವುದಾದರೆ ವಿದೇಶಿ ವಿನಿಮಯ ಸಂಗ್ರಹವು ಕನಿಷ್ಠ 1.5% ಇಳಿದಿದೆ.
ಡಾಲರ್ ವಿರುದ್ಧ ಭಾರತೀಯ ರೂಪಾಯಿಯು ನಿರಂತರ ನಾಲ್ಕನೇ ವಾರವೂ ದುರ್ಬಲಗೊಂಡಿದೆ. ಶುಕ್ರವಾರ ರೂಪಾಯಿ ಮೌಲ್ಯವು ಪ್ರತಿ ಡಾಲರ್ಗೆ 82.83 ಆಗಿತ್ತು.
ಫೆಬ್ರವರಿ 3ರಂದು ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 1.49 ಬಿಲಿಯ ಡಾಲರ್ (ಸುಮಾರು 12,330 ಕೋಟಿ ರೂಪಾಯಿ)ನಷ್ಟು ಕುಸಿದು 575.27 ಬಿಲಿಯ ಡಾಲರ್ (47.61 ಲಕ್ಷ ಕೋಟಿ ರೂಪಾಯಿ) ಆಗಿತ್ತು. ಅದು ಮೂರು ವಾರಗಳ ಏರಿಕೆ ಪ್ರವೃತ್ತಿಯನ್ನು ಕೊನೆಗೊಳಿಸಿತ್ತು.







