ಅಮೆರಿಕದಲ್ಲಿ ಸರಣಿ ಶೂಟೌಟ್: 6 ಮಂದಿ ಮೃತ್ಯು

ನ್ಯೂಯಾರ್ಕ್, ಫೆ.18: ಅಮೆರಿಕದಲ್ಲಿ ಗುಂಡಿನ ದಾಳಿ ಘಟನೆ ಮುಂದುವರಿದಿದ್ದು ಶುಕ್ರವಾರ ಮಿಸಿಸಿಪಿ ರಾಜ್ಯದ ವಿವಿಧೆಡೆ ನಡೆದ ಸರಣಿ ಶೂಟೌಟ್ ಪ್ರಕರಣಗಳಲ್ಲಿ 6 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಓರ್ವ ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.
ಮಿಸಿಸಿಪಿ ರಾಜ್ಯದ ಟೆಟೆ ಕೌಂಟಿಯ ಅರ್ಕಬುಟ್ಲ ಪ್ರದೇಶದಲ್ಲಿ ಶೂಟೌಟ್ ನಡೆದಿದೆ. ಡ್ಯಾಮ್ ರಸ್ತೆಯಲ್ಲಿನ ಮನೆಯೊಂದರಲ್ಲಿ ಮಹಿಳೆಯೊಬ್ಬಳನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದ್ದು ಆಕೆಯ ಪತಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಇದೇ ಪ್ರದೇಶದ ಅಂಗಡಿಯೊಂದರ ಒಳಗೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ.
ಬಳಿಕ ಹತ್ತಿರದ ಮನೆಯೊಂದರ ಒಳಗೆ ಇಬ್ಬರು ಮತ್ತು ಹೊರಗೆ ಇಬ್ಬರ ಮೃತದೇಹ ಪತ್ತೆಯಾಗಿದೆ. ತಕ್ಷಣ ಶೋಧ ಕಾರ್ಯಾಚರಣೆ ನಡೆಸಿದಾಗ ಅರ್ಕಬುಟ್ಲ ಡ್ಯಾಮ್ ರಸ್ತೆಯ ಬಳಿ ನಿಲ್ಲಿಸಿದ್ದ ಕಾರಿನೊಳಗೆ ಓರ್ವ ವ್ಯಕ್ತಿ ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದಿದ್ದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ನಗರದ ಗವರ್ನರ್ ಹೇಳಿದ್ದಾರೆ.