ವಿದ್ಯುತ್ ಚಾಲಿತ ವಾಹನಗಳ ನೀತಿಗಳಲ್ಲಿ ಹೆಚ್ಚಿನ ಸುಧಾರಣೆ ಅಗತ್ಯ: ವರದಿ

ಹೊಸದಿಲ್ಲಿ, ಫೆ. 18: ರಾಜ್ಯ ಸರಕಾರಗಳ ವಿದ್ಯುಚ್ಛಕ್ತಿ ಚಾಲಿತ ವಾಹನ (ಇವಿ) ನೀತಿಗಳ ಪರಿಣಾಮ ಗೋಚರಿಸಬೇಕಾದರೆ ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಕ್ತ ವ್ಯವಸ್ಥೆಗಳನ್ನು ರೂಪಿಸಬೇಕಾಗಿದೆ ಎಂದು ಕ್ಲೈಮೇಟ್ ಟ್ರೆಂಡ್ಸ್ ನ ವರದಿಯೊಂದು ಅಭಿಪ್ರಾಯಪಟ್ಟಿದೆ.
ವರದಿಯು 26 ರಾಜ್ಯಗಳ ಇವಿ ನೀತಿಗಳನ್ನು 21 ಮಾನದಂಡಗಳ ಆಧಾರದಲ್ಲಿ ವಿಶ್ಲೇಷಿಸಿದೆ. ಮಹಾರಾಷ್ಟ್ರ, ಹರ್ಯಾಣ, ದಿಲ್ಲಿ ಮತ್ತು ಉತ್ತರಪ್ರದೇಶ ರಾಜ್ಯಗಳ ನೀತಿಗಳು ಅತ್ಯಂತ ಹೆಚ್ಚು ಸಮಗ್ರವಾಗಿವೆ ಹಾಗೂ 21 ಮಾನದಂಡಗಳ ಪೈಕಿ ಕನಿಷ್ಠ 12ರಲ್ಲಿ ತೇರ್ಗಡೆಯಾಗಿವೆ ಎಂದು ವರದಿ ತಿಳಿಸಿದೆ. ಆದರೆ, ಈ ಕ್ಷೇತ್ರದಲ್ಲಿ ಕೆಲವು ರಾಜ್ಯಗಳ ನಿರ್ವಹಣೆ ಕಳಪೆಯಾಗಿದೆ ಎಂದು ಅದು ಹೇಳಿದೆ.
ಎಂಟು ರಾಜ್ಯಗಳಲ್ಲಿ ಈಗ ಚಾಲ್ತಿಯಲ್ಲಿರುವ ನೀತಿಗಳ ಪರಿಣಾಮವನ್ನೂ ಅದು ವಿಶ್ಲೇಷಿಸಿದೆ. ಆದರೆ, ವಿದ್ಯುತ್ಚಾಲಿತ ವಾಹನಗಳತ್ತ ಜನರು ಗಮನಹರಿಸುವಂತೆ ಮಾಡುವ, ಚಾರ್ಜಿಂಗ್ ಮೂಲಸೌಕರ್ಯ ಒದಗಿಸುವ ಮತ್ತು ಪೆಟ್ರೋಲಿಯಮ್ ಉತ್ಪನ್ನಗಳಿಂದ ಚಲಿಸುವ ವಾಹನಗಳಿಗೆ ನಿರ್ಬಂಧವಿರುವ ಹಸಿರು ವಲಯಗಳನ್ನು ಗುರುತಿಸುವುದು ಮುಂತಾದ ಕ್ಷೇತ್ರಗಳಲ್ಲಿನ ಗುರಿಗಳನ್ನು ಆ ರಾಜ್ಯಗಳು ತಲುಪುವಂತೆ ಮಾಡಲು ಈ ನೀತಿಗಳು ಸಮರ್ಥವಾಗಿಲ್ಲ ಎಂದು ಅದು ಹೇಳಿದೆ.
ದೀರ್ಘಾವಧಿ ನೀತಿಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಅವುಗಳ ಜಾರಿಗಾಗಿ ಉಸ್ತುವಾರಿ ವ್ಯವಸ್ಥೆಗಳನ್ನು ರೂಪಿಸುವುದು ಮುಂತಾದ ಹಲವು ಕ್ಷೇತ್ರಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿರುವುದು ಅಗತ್ಯ ಎಂದು ವರದಿ ಅಭಿಪ್ರಾಯಪಟ್ಟಿದೆ.







