ಟರ್ಕಿ-ಸಿರಿಯಾ ಭೂಕಂಪ: 46 ಸಾವಿರದ ಗಡಿ ದಾಟಿದ ಮೃತರ ಸಂಖ್ಯೆ

ಅಂಕಾರ, ಫೆ.18: ಟರ್ಕಿ ಮತ್ತು ಸಿರಿಯಾದಲ್ಲಿ ಕಳೆದ ವಾರ ಸಂಭವಿಸಿದ ಭೀಕರ ಭೂಕಂಪದಲ್ಲಿ ಬದುಕುಳಿದವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವಂತೆಯೇ, ಮೃತರ ಸಂಖ್ಯೆ 46 ಸಾವಿರದ ಗಡಿ ದಾಟಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಭೀಕರ ಭೂಕಂಪಕ್ಕೆ ಟರ್ಕಿಯಲ್ಲಿ 40,642 ಮಂದಿ, ಸಿರಿಯಾದಲ್ಲಿ 5,800 ಮಂದಿ ಬಲಿಯಾಗಿರುವುದಾಗಿ ವರದಿಯಾಗಿದೆ.
ಟರ್ಕಿಯಲ್ಲಿ 2,64,000 ಕಟ್ಟಡಗಳು ನಾಶಗೊಂಡಿದ್ದು ಕುಸಿದು ಬಿದ್ದ ಅವಶೇಷಗಳಡಿಯಿಂದ ಹಲವರನ್ನು ರಕ್ಷಿಸಲಾಗಿದೆ. ಇನ್ನಷ್ಟು ಜನ ಬದುಕುಳಿದಿರುವ ಸಾಧ್ಯತೆಯಿರುವುದರಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಟರ್ಕಿ ಈ ಪ್ರಾಕೃತಿಕ ದುರಂತವನ್ನು ನಿರ್ವಹಿಸುವಲ್ಲಿ ದೃಢಹೆಜ್ಜೆ ಇರಿಸಿದೆ, ಆದರೆ ಈಗಾಗಲೇ ಆಂತರಿಕ ಬಿಕ್ಕಟ್ಟು, ರಾಜಕೀಯ ಅಸ್ಥಿರತೆಯಿಂದ ಕಂಗೆಟ್ಟಿರುವ ಸಿರಿಯಾದ ಸಂತ್ರಸ್ತರ ಬಗ್ಗೆ ಕಳವಳ ಹೆಚ್ಚುತ್ತಿದೆ. ಭೂಕಂಪದಿಂದ ತೀವ್ರ ಹಾನಿಗೊಂಡಿರುವ ವಾಯವ್ಯ ಸಿರಿಯಾದ ಪ್ರದೇಶದ ಜನತೆಗೆ ಅಗತ್ಯದ ನೆರವನ್ನು ತಲುಪಿಸುವುದು ವಿಶ್ವ ಆಹಾರ ಯೋಜನೆ(ಡಬ್ಲ್ಯೂಎಫ್ಪಿ)ಗೆ ನಿಜಕ್ಕೂ ಸವಾಲಿನ ಕಾರ್ಯವಾಗಿದೆ.
ಈ ಮಧ್ಯೆ, ಶುಕ್ರವಾರ ಟರ್ಕಿಯ ಅಂತಾಕ್ಯ ನಗರದಲ್ಲಿ ಕುಸಿದುಬಿದ್ದ ಕಟ್ಟಡದ ಅವಶೇಷಗಳಡಿಯಿಂದ ಸಿರಿಯಾದ 5 ಪ್ರಜೆಗಳನ್ನು ರಕ್ಷಿಸಲಾಗಿದೆ. ಜರ್ಮನಿಯು ಮ್ಯೂನಿಚ್ನಲ್ಲಿ ನಡೆಯುತ್ತಿರುವ ಭದ್ರತಾ ಸಮಾವೇಶದ ನೇಪಥ್ಯದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಡಬ್ಲ್ಯೂಎಫ್ಪಿ ನಿರ್ದೇಶಕ ಡೇವಿಡ್ ಬಿಸ್ಲೆ, ಭೂಕಂಪ ಪೀಡಿತ ಪ್ರದೇಶದಲ್ಲಿ ನೆರವು ವಿತರಿಸುವ ಕಾರ್ಯಕ್ಕೆ ಟರ್ಕಿ ಮತ್ತು ಸಿರಿಯಾ ಸರಕಾರಗಳು ಸಹಕರಿಸುತ್ತಿವೆ. ಆದರೆ ವಾಯವ್ಯ ಸಿರಿಯಾದಲ್ಲಿ ನೆರವು ವಿತರಣೆಗೆ ಅಡ್ಡಿಯಾಗಿದೆ ಎಂದು ಹೇಳಿದ್ದಾರೆ.
ವಾಯವ್ಯ ಸಿರಿಯಾದ ಅಧಿಕಾರಿಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡದಿರುವುದು ನೆರವು ವಿತರಣೆಗೆ ತಡೆಯಾಗಿದೆ. ಜತೆಗೆ ನಮಗೆ ಆರ್ಥಿಕ ಸಂಪನ್ಮೂಲದ ಕೊರತೆಯೂ ಎದುರಾಗಿದೆ. ಭೂಕಂಪ ಸಂತ್ರಸ್ತರಿಗೆ ನೆರವು ವಿತರಿಸುವ ಕಾರ್ಯಕ್ಕೇ ನಮಗೆ ಸುಮಾರು 50 ದಶಲಕ್ಷ ಡಾಲರ್ನಷ್ಟು ಮೊತ್ತದ ಅಗತ್ಯವಿದೆ ಎಂದವರು ಹೇಳಿದ್ದಾರೆ. ಸಿರಿಯಾದಲ್ಲಿ 10 ವರ್ಷಕ್ಕೂ ಅಧಿಕ ಸಮಯದಿಂದ ಮುಂದುವರಿದಿರುವ ಅಂತರ್ಯುದ್ಧದಿಂದ ಕಂಗೆಟ್ಟ ಸಾವಿರಾರು ಜನರು ಟರ್ಕಿಯಲ್ಲಿ ಆಶ್ರಯ ಪಡೆದಿದ್ದಾರೆ.
ಈ ಮಧ್ಯೆ, ಭೂಕಂಪದಿಂದ ಜರ್ಝರಿತಗೊಂಡಿರುವ ಪ್ರದೇಶದಲ್ಲಿ ಆರೋಗ್ಯ ಸಮಸ್ಯೆಯ ಭೀತಿ ಎದುರಾಗಿದೆ. ಲಕ್ಷಾಂತರ ಕಟ್ಟಡಗಳು ನೆಲಸಮಗೊಂಡಿರುವುದು ನೈರ್ಮಲ್ಯ ಮೂಲಸೌಕರ್ಯವನ್ನು ಧ್ವಂಸಗೊಳಿಸಿರುವುದರಿಂದ ಸೋಂಕು ಹರಡುವ ಸಂಭವವಿದೆ ಎಂದು ಆರೋಗ್ಯ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಕರುಳು ಮತ್ತು ಶ್ವಾಸಕೋಶದ ಸೋಂಕು ಪ್ರಕರಣ ಹೆಚ್ಚಿದ್ದರೂ, ಈ ಪ್ರದೇಶದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಸವಾಲೆಸೆಯುವಂತಹ ಸಮಸ್ಯೆಗಳಿಲ್ಲ. ಸಂಭಾವ್ಯ ಸೋಂಕು ರೋಗದ ಮೇಲೆ ನಿಗಾವಹಿಸಲು ಮತ್ತು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಂಕು ಹರಡದಂತೆ ತಡೆಯುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಟರ್ಕಿಯ ಆರೋಗ್ಯ ಸಚಿವರು ಹೇಳಿದ್ದಾರೆ.
ಆಕ್ರೋಶ ಸ್ಫೋಟ
ಈ ಮಧ್ಯೆ, ಭೂಕಂಪ ಪ್ರಭಲವಾಗಿದ್ದರೂ, ಇಷ್ಟೊಂದು ವ್ಯಾಪಕ ಪ್ರಮಾಣದಲ್ಲಿ ಕಟ್ಟಡಗಳು ನೆಲಸಮಗೊಂಡಿರುವುದು ನಿರ್ಮಾಣ ಕಾಮಗಾರಿಯಲ್ಲಿನ ಭ್ರಷ್ಟಾಚಾರಕ್ಕೆ ಉತ್ತಮ ನಿದರ್ಶನವಾಗಿದೆ ಎಂದು ಟರ್ಕಿಯ ನಿವಾಸಿಗಳು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭೂಕಂಪದ ತೀವ್ರತೆಯನ್ನು ಸಹಿಸಿಕೊಳ್ಳುವ ಆಧುನಿಕ ತಂತ್ರಜ್ಞಾನ ಬಳಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಹೇಳಿಕೊಂಡಿತ್ತು. ಆದರೆ ಸೂಕ್ತ ಪ್ರಮಾಣದಲ್ಲಿ ಸಿಮೆಂಟ್ ಅಥವಾ ಕಬ್ಬಿಣ ಬಳಸದೆ ಕಟ್ಟಡ ನಿರ್ಮಿಸಿರುವುದು ನೆಲಸಮಗೊಂಡ ಕಟ್ಟಡದ ಅವಶೇಷಗಳಿಂದ ಬಹಿರಂಗಗೊಂಡಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಜತೆಗೆ ಟರ್ಕಿ ಅಥವಾ ಸಿರಿಯಾದ ಅಧಿಕಾರಿಗಳು ಭೂಕಂಪದ ಬಳಿಕ ನಾಪತ್ತೆಯಾಗಿರುವವರ ಬಗ್ಗೆ ಯಾವುದೇ ಮಾಹಿತಿ ಪ್ರಕಟಿಸಿಲ್ಲ ಎಂಬ ಆಕ್ರೋಶವೂ ವ್ಯಕ್ತವಾಗಿದೆ.