ಟರ್ಕಿ ಭೂಕಂಪ: 12 ದಿನದ ಬಳಿಕ ಮತ್ತೊಬ್ಬ ವ್ಯಕ್ತಿಯ ರಕ್ಷಣೆ

ಅಂಕಾರ, ಫೆ.18: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಬದುಕುಳಿದವರಿಗಾಗಿ ರಕ್ಷಣಾ ಕಾರ್ಯ ಮುಂದುವರಿದಿರುವಂತೆಯೇ, ಭೂಕಂಪದ ಸುಮಾರು 278 ಗಂಟೆಗಳ ಬಳಿಕ ಕಲ್ಲುಮಣ್ಣಿನ ರಾಶಿಯಡಿಯಿಂದ 45 ವರ್ಷದ ವ್ಯಕ್ತಿಯನ್ನು ರಕ್ಷಿಸುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ ಎಂದು ರಕ್ಷಣಾ ತಂಡವನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಭೂಕಂಪ ಸಂಭವಿಸಿ 12 ದಿನಗಳ ಬಳಿಕ ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಹಕನ್ ಯಸಿನೊಗ್ಲು ಎಂದು ಗುರುತಿಸಲಾಗಿದೆ. ಈ ಮಧ್ಯೆ, ಭೂಕಂಪದಿಂದ ತೀವ್ರ ಹಾನಿಗೊಳಗಾದ ಹತಾಯ್ ಪ್ರಾಂತದ ಅಂತಾಕ್ಯ ನಗರದಲ್ಲಿ ಶುಕ್ರವಾರ 14 ವರ್ಷದ ಬಾಲಕನ ಸಹಿತ 3 ಮಂದಿಯನ್ನು ರಕ್ಷಿಸಲಾಗಿದೆ ಎಂದು ಟರ್ಕಿಯ ಆರೋಗ್ಯ ಸಚಿವ ಫಹ್ರೆಟಿನ್ ಕೊಕಾ ಟ್ವೀಟ್ ಮಾಡಿದ್ದಾರೆ.
ಟರ್ಕಿಯ ಸುಮಾರು 200 ಸ್ಥಳಗಳಲ್ಲಿ ಈಗ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಟರ್ಕಿ ಉಪಾಧ್ಯಕ್ಷ ಫುವತ್ ಆಕ್ಟಯ್ ಹೇಳಿದ್ದಾರೆ.
Next Story