ಸಿರಿಯಾ: ಉಗ್ರರ ದಾಳಿಯಲ್ಲಿ ಕನಿಷ್ಟ 53 ಮಂದಿ ಮೃತ್ಯು

ಲೆಬನಾನ್, ಫೆ.18: ಮಧ್ಯ ಸಿರಿಯಾದಲ್ಲಿ ಶುಕ್ರವಾರ ನಡೆದ ಹೊಂಚುದಾಳಿಯಲ್ಲಿ ಕನಿಷ್ಟ 53 ಮಂದಿ ಮೃತಪಟ್ಟಿರುವುದಾಗಿ ಸರಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.
ಅಲ್-ಸೊಖ್ನಾ ನಗರದ ವಾಯವ್ಯ ಪ್ರದೇಶದಲ್ಲಿ ಅಣಬೆಗಳನ್ನು ಹೆಕ್ಕುತ್ತಿದ್ದವರನ್ನು ಗುರಿಯಾಗಿಸಿಕೊಂಡು ಐಸಿಸ್ ಸಂಘಟನೆಯ ಉಗ್ರರು ನಡೆಸಿರುವ ದಾಳಿಯಲ್ಲಿ 53 ನಾಗರಿಕರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.
ಮೃತರಲ್ಲಿ 46 ಮಂದಿ ನಾಗರಿಕರು, 7 ಯೋಧರು ಸೇರಿದ್ದಾರೆ ಎಂದು ಭದ್ರತಾ ಪಡೆಯ ಮೂಲಗಳು ತಿಳಿಸಿವೆ. ಶುಕ್ರವಾರ ನಡೆದ ದಾಳಿ ಘಟನೆಯನ್ನು ಬ್ರಿಟನ್ ಮೂಲದ ಸಿರಿಯಾ ಮಾನವ ಹಕ್ಕುಗಳ ನಿಗಾ ಸಮಿತಿಯೂ ದೃಢಪಡಿಸಿದೆ. ಈ ಮಧ್ಯೆ, ಐಸಿಸ್ನ ಉನ್ನತ ಮುಖಂಡ ಹಮ್ಝಾ ಅಲ್ಹೋಮ್ಸಿಯನ್ನು ಹತ್ಯೆ ಮಾಡಿದ ಕಾರ್ಯಾಚರಣೆ ಸಂದರ್ಭ ಅಮೆರಿಕದ ನಾಲ್ವರು ಯೋಧರು ಮೃತಪಟ್ಟಿರುವುದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ ವರದಿ ಮಾಡಿದೆ.
ಇದೇ ಪ್ರದೇಶದಲ್ಲಿ ಶನಿವಾರ ನಡೆದ ಮತ್ತೊಂದು ದಾಳಿ ಘಟನೆಯಲ್ಲಿ 16 ನಾಗರಿಕರು ಮೃತಪಟ್ಟಿದ್ದು 30ಕ್ಕೂ ಅಧಿಕ ನಾಗರಿಕರನ್ನು ಅಪಹರಿಸಲಾಗಿದೆ. ಬಳಿಕ 25 ಜನರನ್ನು ಉಗ್ರರು ಬಿಡುಗಡೆಗೊಳಿಸಿದ್ದು ಉಳಿದವರ ಬಗ್ಗೆ ಮಾಹಿತಿಯಿಲ್ಲ ಎಂದು ಮಾನವ ಹಕ್ಕುಗಳ ನಿಗಾ ಸಮಿತಿ ಹೇಳಿದೆ.