ರಾಜ್ಯಗಳಿಗೆ 5 ವರ್ಷಗಳ ಜಿಎಸ್‌ಟಿ ಪರಿಹಾರ ಪಾವತಿಗೆ ನಿರ್ಧಾರ: ಜಿಎಸ್‌ಟಿ ಮೇಲ್ಮನವಿ ನ್ಯಾಯಾಧೀಕರಣ ರಚನೆಗೆ ಸಮ್ಮತಿ
ಮಂಡಳಿ ಸಭೆಯಲ್ಲಿ ನಿರ್ಧಾರ

ಹೊಸದಿಲ್ಲಿ, ಫೆ.19 : ಸರಕು ಹಾಗೂ ಸೇವಾ ತೆರಿಗೆ (GST) ಮಂಡಳಿಯ 49ನೇ ಸಭೆ ಶನಿವಾರ ಹೊಸದಿಲ್ಲಿಯಲ್ಲಿ ನಡೆದಿದ್ದು, ರಾಜ್ಯಗಳಿಗೆ ಬಾಕಿಯಿದ್ದ ಐದು ವರ್ಷಗಳ 16,982 ಕೋಟಿ ರೂ. ಪರಿಹಾರವನ್ನು ಪಾವತಿಸುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಯಿತು.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಎಸ್‌ಟಿಗೆ ಸಂಬಂಧಿಸಿದ ವಿವಾದಗಳ ಇತ್ಯರ್ಥಕ್ಕೆ ಮೇಲ್ಮನವಿ ನ್ಯಾಯಾಧೀಕರಣ (ಅಪಲೇಟ್ ಟ್ರಿಬ್ಯೂನಲ್) ರಚನೆ, ಪಾನ್ ಮಸಾಲಾ ಹಾಗೂ ಗುಟ್ಕಾ ಉದ್ಯಮಗಳಲ್ಲಿ ತೆರಿಗೆಗಳ್ಳತನವನ್ನು ತಡೆಗಟ್ಟಲು ಕಾರ್ಯವಿಧಾನ ರೂಪಿಸುವುದು ಮತ್ತಿತರ ವಿಷಯಗಳ ಬಗ್ಗೆ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಜಿಎಸ್‌ಟಿ ಮಂಡಳಿಯ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು, ರಾಜ್ಯಗಳಿಗೆ ಬಾಕಿಯಿರುವ 16,982 ಕೋಟಿ ರೂ. ಜಿಎಸ್‌ಟಿ ಪರಿಹಾರವನ್ನು ಸಂಪೂರ್ಣವಾಗಿ ಪಾವತಿಸಲಾಗುವುದು. ಇದಕ್ಕೆ ಬೇಕಾದ ಹಣಕಾಸುನಿಧಿಯು ಜಿಎಸ್‌ಟಿ ಪರಿಹಾರ ನಿಧಿಯಿಂದ ಲಭ್ಯವಿಲ್ಲದೆ ಇರುವುದರಿಂದ ಅದನ್ನು ಸರಕಾರದ ಬೊಕ್ಕಸದಿಂದಲೇ ಪಾವತಿಸಲಾಗುವುದು ಎಂದರು. ಭವಿಷ್ಯದಲ್ಲಿ ಮೇಲ್ತೆರಿಗೆ (ಸೆಸ್) ಸಂಗ್ರಹದಿಂದ ಅದನ್ನು ಸರಿದೂಗಿಸಲಾಗುವುದು ಎಂದು ನಿರ್ಮಲಾ ತಿಳಿಸಿದರು.
ಇದರೊಂದಿಗೆ ಐದು ವರ್ಷಗಳಿಂದ ರಾಜ್ಯಗಳಿಗೆ ಬಾಕಿಯಿದ್ದ ಜಿಎಸ್‌ಟಿ ಪರಿಹಾರವು ಸಂಪೂರ್ಣವಾಗಿ ಚುಕ್ತಾ (ಕ್ಲಿಯರ್) ಆಗಲಿದೆ ಎಂದರು.
2017ರ ಸರಕು ಹಾಗೂ ಸೇವಾ ತೆರಿಗೆ (ರಾಜ್ಯಗಳಿಗೆ ಪರಿಹಾರ) ಕಾಯ್ದೆಯು 2017ರ ಜನವರಿ 1ರಿಂದೀಚೆಗೆ ರಾಜ್ಯಗಳಿಗೆ ಜಿಎಸ್ಟಿ ಜಾರಿಯಿಂದ ಉಂಟಾಗಿರುವ ನಷ್ಟವನ್ನು ಪಾವತಿಸಲು ಮೇಲ್ತೆರಿಗೆಯನ್ನು ವಿಧಿಸಲು ಕೇಂದ್ರ ಸರಕಾರಕ್ಕೆ ಅನುಮತಿ ನೀಡುತ್ತದೆ. ಜಿಎಸ್‌ಟಿಯ ಜಾರಿಯಿಂದಾಗಿ ಹಲವಾರು ರಾಜ್ಯಗಳಿಗೆ ಆದಾಯ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ 2017ರ ಜುಲೈನಿಂದ ಮೊದಲ್ಗೊಂಡು ಐದು ವರ್ಷಗಳ ಪರಿಹಾರವನ್ನು ಕೇಂದ್ರವು ರಾಜ್ಯಗಳಿಗೆ ನೀಡಬೇಕಾಗಿದೆ.
ಜಿಎಸ್‌ಟಿ ಸಭೆಯಲ್ಲಿ ಕೈಗೊಳ್ಳಲಾದ ಪ್ರಮುಖ ನಿರ್ಣಯಗಳು
ಪೆನ್ಸಿಲ್ ಶಾರ್ಪನರ್ಗಳ ಮೇಲಿನ ಜಿಎಸ್ಟಿ ಶೇ.18ಕ್ಕೆ ಇಳಿಸುವ, ದ್ರವರೂಪದ ಬೆಲ್ಲ (ಜೋನಿ ಬೆಲ್ಲ)ಕ್ಕೆ ಯಾವುದೇ ಜಿಎಸ್ಟಿಯನ್ನು ವಿಧಿಸದಿರಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಸೀತಾರಾಮನ್ ತಿಳಿಸಿದರು. ಇದಕ್ಕೂ ಮುನ್ನ ಜೋನಿಬೆಲ್ಲಕ್ಕೆ ಶೇ.18ರಷ್ಟು ಜಿಎಸ್ಟಿ ವಿಧಿಸಲಾಗುತ್ತಿತ್ತು ಎಂದರು. ಆದರೆ ಈ ದ್ರವ ಬೆಲ್ಲವನ್ನು ಲೇಬಲ್ ಅಥವಾ ಪ್ಯಾಕೇಜ್ ನೊಂದಿಗೆ ಮಾರಾಟ ಮಾಡಿದಲ್ಲಿ ಅದಕ್ಕೆ ಶೇ.5ರಷ್ಟು ಜಿಎಸ್‌ಟಿಯನ್ನು ವಿಧಿಸಲಾಗುವುದು ಎಂದು ಸಚಿವೆ ತಿಳಿಸಿದರು.
ಪಾನ್ ಮಸಾಲಾ ಹಾಗೂ ಗುಟ್ಕಾಗಳಿಗೆ ಸಾಮರ್ಥ ಆಧಾರಿತ ತೆರಿಗೆ ಹೇರಿಕೆ ಪದ್ಧತಿಯನ್ನು ಜಾರಿಗೊಳಿಸುವ ಸಚಿವ ಸಮಿತಿಯ ತೀರ್ಮಾನಕ್ಕೆ ಜಿಎಸ್‌ಟಿ ಒಪ್ಪಿಗೆ ನೀಡಿದೆ ಎಂದು ಸೀತಾರಾಮನ್ ತಿಳಿಸಿದರು.
ಕೆಲವು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಜಿಎಸ್‌ಟಿ ಅಹವಾಲುಗಳ ಇತ್ಯರ್ಥಕ್ಕೆ ಮೇಲ್ಮನವಿ ನ್ಯಾಯಾಧೀಕರಣ ಸ್ಥಾಪನೆ ಕುರಿತ ಸಚಿವ ಸಮಿತಿಯ ವರದಿಯನ್ನು ಸಭೆಯಲ್ಲಿ ಸ್ವೀಕರಿಸಲಾಯಿತೆಂದು ಅವರು ಹೇಳಿದರು.
ಜಿಎಸ್‌ಟಿ ಸಭೆಯಲ್ಲಿ ಕೈಗೊಳ್ಳಲಾದ ಕೆಲವು ಪ್ರಮುಖ ನಿರ್ಧಾರಗಳು
1. ರಿವರ್ಸ್ ಚಾರ್ಜ್ ಕಾರ್ಯವಿಧಾನದ ಅಡಿಯಲ್ಲಿ ನ್ಯಾಯಾಲಯಗಳು ಹಾಗೂ ನ್ಯಾಯಾಧೀಕರಣಗಳು ನೀಡುವ ಸೇವೆಗಳಿಗೆ ಜಿಎಸ್ಟಿ ವಿಧಿಸಲಾಗುವುದು.
2. ಪೆನ್ಸಿಲ್ ಶಾರ್ಪನರ್ಗಳ ಜಿಎಸ್ಟಿ ಶೇ.18ರಿಂದ ಶೇ.12ಕ್ಕೆ ಇಳಿಕೆ.
3. ದ್ರವರೂಪದ ಬೆಲ್ಲ (ಜೋನಿ ಬೆಲ್ಲ)ವನ್ನು ಪ್ಯಾಕೇಜಿಂಗ್ ಇಲ್ಲದೆ ಮಾರಾಟ ಮಾಡಿದಲ್ಲಿ ಶೂನ್ಯ ಜಿಎಸ್ಟಿ. ಪ್ಯಾಕೇಜಿಂಗ್ ಮತ್ತು ಲೇಬಲಿಂಗ್ನೊಂದಿಗೆ ಮಾರಾಟ ಮಾಡಿದಲ್ಲಿ ಶೇ.5 ಜಿಎಸ್ಟಿ.
4. ತಿರಸ್ಕೃತವಾದ ಕಲ್ಲಿದ್ದಲ್ಲಿಗೆ ಜಿಎಸ್ಟಿ ಇಲ್ಲ
5. ಟ್ಯಾಗ್‌ಗಳು, ಟ್ರ್ಯಾಕಿಂಗ್ ಸಾಧನಗಳು ಅಥವಾ ಡೇಟಾ ಲಾಗರ್ಗಳಿಗೆ ಜಿಎಸ್‌ಟಿ ಇರುವುದಿಲ್ಲ. ಈ ಮೊದಲು ಅವುಗಳಿಗೆ ಜಿಎಸ್‌ಟಿ ಶೇ.18ರಷ್ಟಿತ್ತು.
6. ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಾತಿಗಾಗಿ ನಡೆಸುವ ಪ್ರವೇಶ ಪರೀಕ್ಷೆಗಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ನೀಡುವ ಸೇವೆಗಳಿಗೆ ಜಿಎಸ್‌ಟಿ ವಿನಾಯಿತಿ.
7. ವಾರ್ಷಿಕ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆಯಲ್ಲಿ ತಡವಾಗಿದ್ದಕ್ಕಾಗಿ ವಿಧಿಸಲಾಗುವ ವಿಳಂಬ ಶುಲ್ಕದ ಮೇಲಿನ ಜಿಎಸ್‌ಟಿಯ ಪರಿಷ್ಕರಣೆ.
8. ಜಿಎಸ್‌ಟಿ ಅಹವಾಲುಗಳ ಇತ್ಯರ್ಥಕ್ಕೆ ಮೇಲ್ಮನವಿ ನ್ಯಾಯಾಧೀಕರಣ ರಚನೆ







