ದಕ್ಷಿಣ ಆಫ್ರಿಕದಿಂದ ಮಧ್ಯಪ್ರದೇಶದ ಕುನೋ ಅಭಯಾರಣ್ಯಕ್ಕೆ ಮತ್ತೆ ಚೀತಾಗಳ ಆಗಮನ
ಭೋಪಾಲ್, ಫೆ.18: ಭಾರತದಲ್ಲಿ ಸಂಪೂರ್ಣವಾಗಿ ಅಳಿದುಹೋಗಿದ್ದ ಚೀತಾ ಸಂತತಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಇನ್ನೊಂದು ಮಹತ್ವದ ಹೆಜ್ಜೆಯಾಗಿ ದಕ್ಷಿಣ ಆಫ್ರಿಕದಿಂದ ತರಲಾದ 12 ಚಿರತೆಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಅಭಯಾರಣ್ಯದಲ್ಲಿ ಶನಿವಾರ ಬಿಡುಗಡೆಗೊಳಿಸಲಾಯಿತು. ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ನಮೀಬಿಯ ಸರಕಾರದ ಜೊತೆ ಏರ್ಪಡಿಸಿಕೊಂಡ ಒಪ್ಪಂದದಲ್ಲಿ ಎಂಟು ಚೀತಾಗಳನ್ನು ಭಾರತಕ್ಕೆ ತರಲಾದ ಐದು ತಿಂಗಳುಗಳ ಬಳಿಕ ದಕ್ಷಿಣ ಆಫ್ರಿಕದಿಂದ ಚೀತಾಗಳ ಆಗಮನವಾಗಿದೆ.
ಶಿಯೊಪುರ ಜಿಲ್ಲೆಯಲ್ಲಿರುವ ಕುನೊ ರಾಷ್ಟ್ರೀಯ ಅಭಯಾರಣ್ಯದಲ್ಲಿಸ್ಥಾಪಿಸಲಾದ ಆವರಣದೊಳಗೆ ಈ 12 ಚಿರತೆಗಳನ್ನು ಮಧ್ಯಾಹ್ನ 12:00 ಗಂಟೆಯ ವೇಳೆಗೆ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್, ಮುಖ್ಯಮಂತ್ರಿ ಶಿವರಾಜ್ಸಿಂಗ್ ಚೌಹಾಣ್ ಮತ್ತಿತರ ಅತಿಥಿಗಳು ಬಿಡುಗಡೆಗೊಳಿಸಿದರು. ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮಾರ್ ಹಾಗೂ ಜ್ಯೋತಿರಾದಿತ್ಯ ಸಿಂಧ್ಯಾ ಉಪಸ್ಥಿತರಿದ್ದರು.
ಈ ಚೀತಾಗಳನ್ನು ಹೊತ್ತ ಭಾರತೀಯ ವಾಯುಪಡೆಯ ಸಿ-17 ಗ್ಲೋಬ್ಮಾಸ್ಟರ್ ವಿಮಾನವು ದಕ್ಷಿಣ ಆಫ್ರಿಕದ ಜೋಹಾನ್ಸ್ಬರ್ಗ್ನ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಹಾರಾಟವನ್ನು ಆರಂಭಿಸಿದ್ದು, 10 ತಾಸುಗಳ ಪ್ರಯಾಣದ ಬಳಿಕ ಶನಿವಾರ ಬೆಳಗ್ಗೆ 10.30ರ ವೇಳೆಗೆ ಗ್ವಾಲಿಯರ್ನಲ್ಲಿರುವ ಭಾರತೀಯ ವಾಯುಪಡೆಯ ನೆಲೆಯಲ್ಲಿ ಬಂದಿಳಿಯಿತು.
ಇಂದು ತರಲಾದ ಎಲ್ಲಾ 12 ಚೀತಾಗಳು ಆರೋಗ್ಯಕರವಾಗಿವೆ, ಎಚ್ಚರದಲ್ಲಿವೆ ಹಾಗೂ ಸಂಪೂರ್ಣವಾಗಿ ಸಹಜಸ್ಥಿತಿಯಲ್ಲಿವೆ. ಅವುಗಳನ್ನು ಬಂಧನದಿಂದ ಬಿಡುಗಡೆಗೊಳಿಸಲಾಗಿದ್ದು, ಕುನೋ ರಾಷ್ಟ್ರೀಯ ಅಭಯಾರಣ್ಯದಲ್ಲಿ ಸ್ಥಾಪಿಸಲಾದ ವಿಶೇಷ ಆವರಣದಲ್ಲಿ ಬಿಡಲಾಗಿದೆ ಎಂದು ಚೀತಾ ಯೋಜನೆಯ ವರಿಷ್ಠ ಎಸ್.ಪಿ.ಯಾದವ್ ತಿಳಿಸಿದ್ದಾರೆ.
ಗ್ವಾಲಿಯರ್ ವಾಯುನೆಲೆಯಿಂದ ಈ ಚೀತಾಗಳನ್ನು ಐಎಎಫ್ನ ಮೂರು ಎಂಐ-17 ಹೆಲಿಕಾಪ್ಟರ್ಗಳ ಮೂಲಕ ಕುನಾವೊ ರಾಷ್ಟ್ರೀಯ ಅಭಯಾರಣ್ಯಕ್ಕೆ ತರಲಾಗಿದೆ. ಭಾರತದಲ್ಲಿ ಚೀತಾ ಸಂತತಿಯನ್ನು ಮರುಪರಿಚಯಿಸುವ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕ ಹಾಗೂ ಭಾರತದ ನಡುವೆ ಈ ವರ್ಷದ ಆರಂಭದಲ್ಲಿ ತಿಳುವಳಿಕಾ ಒಪ್ಪಂದ ಏರ್ಪಟ್ಟಿತ್ತು.
ಇದಕ್ಕೂ ಮೊದಲು ನಮೀಬಿಯದಿಂದ ತರಲಾದ ಎಂಟು ಚೀತಾಗಳನ್ನು 2022ರ ಸೆಪ್ಟೆಂಬರ್ 17ರಂದು ಪ್ರಧನಿ ನರೇಂದ್ರ ಮೋದಿ ಕುನೋ ರಾಷ್ಟ್ರೀಯ ಅಭಯಾರಣ್ಯದಲ್ಲಿ ಬಿಡುಗಡೆಗೊಳಿಸಿದ್ದು. ಈ ಎಂಟು ಚೀತಾಗಳಿಗೂ ರೇಡಿಯೋ ಕಾಲರ್ ಅಳವಡಿಸಲಾಗಿದ್ದು ಅವುಗಳ ಚಲನವಲನಗಳ ಮೇಲೆ ಉಪಗ್ರಹದ ಮೂಲಕ ನಿಗಾವಿರಿಸಲಾಗಿದೆ. ಪ್ರತಿಯೊಂದು ಚೀತಾದ ಮೇಲೂ ನಿಗಾವಿರಿಸಲು ತಂಡವನ್ನೇ ರಚಿಸಲಾಗಿದ್ದು, 24 ತಾಸುಗಳ ಕಾಲವೂ ಅವುಗಳ ತಾಣದ ಮೇಲೆ ಕಣ್ಗಾವಲಿರಿಸಲಾಗಿದೆ.