ತೆರಿಗೆ ಪಾವತಿಸದ ಮಂತ್ರಿಮಾಲ್: ಚರಾಸ್ಥಿ ಜಪ್ತಿಗೆ ಮುಂದಾಗಿದ್ದ ಬಿಬಿಎಂಪಿಗೆ ಕೋರ್ಟ್ ತಡೆಯಾಜ್ಞೆ

ಬೆಂಗಳೂರು: ತೆರಿಗೆ ಹಣವನ್ನು ಪಾವತಿಸದ ಹಿನ್ನೆಲೆ ಮಂತ್ರಿ ಮಾಲ್‍ನ ಚರಾಸ್ತಿ ಜಪ್ತಿಗೆ ಮುಂದಾಗಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ಮಾಲ್‍ನ ಸಿಬ್ಬಂದಿ ಸಿಟಿ ಸಿವಿಲ್ ಕೋರ್ಟ್‍ನ ತಡೆಯಾಜ್ಞೆ ತೋರಿಸಿ, ವಾಪಾಸ್ ಕಳುಹಿಸಿದ್ದಾರೆ.
ಶನಿವಾರ ಮಲ್ಲೇಶ್ವರಂನಲ್ಲಿರುವ ಮಂತ್ರಿ ಮಾಲ್ ಮೇಲೆ ಬಿಬಿಎಂಪಿ ಅಧಿಕಾರಿಗಳು ಪೊಲೀಸ್ ಮತ್ತು ಮಾರ್ಷಲ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದರು. ಅಧಿಕಾರಿಗಳ ತಂಡವು ಕಚೇರಿಯ ಲ್ಯಾಪ್‍ಟಾಪ್, ಕಂಪ್ಯೂಟರ್, ಚೇರ್, ಟೇಬಲ್, ಸೇರಿದಂತೆ ಇತರೆ ವಸ್ತುಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಚರಾಸ್ತಿ ವಶಕ್ಕೆ ಪಡೆಯದಂತೆ ಮಂತ್ರಿಮಾಲ್ ಪರ ವಕೀಲರು ಸಿಟಿ ಸಿವಿಲ್ ಕೋರ್ಟ್‍ನಿಂದ ಫೆ.2ರಂದು ತಡೆಯಾಜ್ಞೆ ತಂದಿದ್ದರು. ಆದರೆ ದಾಳಿ ವೇಳೆ ನ್ಯಾಯಾಲಯದ ತಡೆಯಾಜ್ಞೆ ಪ್ರತಿ ತೋರಿಸಿರಲಿಲ್ಲ. ಹಾಗಾಗಿ ಕಚೇರಿಯ ವಸ್ತುಗಳನ್ನು ಪಾಲಿಕೆ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ತಡೆಯಾಜ್ಞೆ ತೋರಿಸಿದ ಹಿನ್ನಲೆ ವಶಕ್ಕೆ ಪಡೆದ ವಸ್ತುಗಳನ್ನು ವಾಪಸ್ ಕಚೇರಿಯಲ್ಲಿ ಇಡಲಾಯಿತು.
ಮಂತ್ರಿ ಮಾಲ್ 42.63 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿತ್ತು. ಈ ಹಿಂದೆಯೇ ಮಂತ್ರಿ ಮಾಲ್ ಕೊಟ್ಟಿದ್ದ ಚೆಕ್ ಬೌನ್ಸ್ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ನೋಟಿಸ್ ಕೊಟ್ಟಿದ್ದರೂ, ತೆರಿಗೆ ಹಣವನ್ನು ಪಾವತಿ ಮಾಡಿರಲಿಲ್ಲ. ಹಾಗಾಗಿ ಚರಾಸ್ಥಿ ವಶಕ್ಕೆ ಪಡೆಯಲು ಬಿಬಿಎಂಪಿ ಮುಂದಾಗಿತ್ತು.







