ಮಂಡ್ಯ: ಉಪವಾಸ ಸತ್ಯಾಗ್ರಹ; ಇಬ್ಬರು ರೈತರು ಅಸ್ವಸ್ಥ

ಮಂಡ್ಯ: ಟನ್ ಕಬ್ಬಿಗೆ 4,500 ರೂ. ನಿಗದಿ, ಹಾಲಿನ ದರ ಹೆಚ್ಚಳ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಇಬ್ಬರು ರೈತರು ಅಸ್ವಸ್ಥಗೊಂಡಿದ್ದಾರೆ.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ರೈತಸಂಘದ ನೇತೃತ್ವದಲ್ಲಿ ನೂರುದಿನದಿಂದ ಅಹೋರಾತ್ರಿ ಧರಣಿ ನಡೆಸಿದ್ದ ರೈತರು, ನಾಲ್ಕು ದಿನಗಳಿಂದ ಅಮರಾಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಉಪವಾಸ ಕೈಗೊಂಡಿರುವ ಐವರು ರೈತರಲ್ಲಿ ರಾಮಕೃಷ್ಣ ಹಾಗೂ ಅಣ್ಣಯ್ಯ ಅವರು ಅಸ್ವಸ್ಥಗೊಂಡಿದ್ದರಿಂದ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯಕುಮಾರ್, ವಿನೋದ್ ಮತ್ತು ಸಂತೋಷ್ ಕುಮಾರ್ ಸತ್ಯಾಗ್ರಹ ಮುಂದುವರಿಸಿದ್ದಾರೆ.
ರೈತರ ಬಳಿಗೆ ದಾವಿಸಿದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮತ್ತು ಎಸ್ಪಿ ಎನ್.ಯತೀಶ್, ತಹಶೀಲ್ದಾರ್ ಕುಂಞಿ ಅಹಮದ್ ಸತ್ಯಾಗ್ರಹ ನಿರತ ರೈತರ ಆರೋಗ್ಯ ವಿಚಾರಿಸಿದರು.
ತಮ್ಮ ಬೇಡಿಕೆಯನ್ನು ಸರಕಾರದ ಗಮನಕ್ಕೆ ತಂದು ಈಡೇರಿಸುವ ಪ್ರಯತ್ನ ಮುಂದುವರಿದಿದೆ. ಆದ್ದರಿಂದ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಬೇಕು ಎಂಬುದಾಗಿ ನಾಗರಾಜು ಮನವಿ ಮಾಡಿಕೊಂಡರೂ ರೈತರು ತಮ್ಮ ಪಟ್ಟು ಸಡಿಸಲಿಲ್ಲ.
ದರ್ಶನ್ ಪುಟ್ಟಣ್ಣಯ್ಯ, ಪ್ರಸನ್ನ ಎನ್.ಗೌಡ, ಬಿ.ಬೊಮ್ಮೇಗೌಡ, ರವಿಕುಮಾರ್, ಪ್ರಸನ್ನಕುಮಾರ್, ಇತರೆ ರೈತ ಮುಖಂಡರು ಉಪಸ್ಥಿತರಿದ್ದರು.







