‘ಡಬಲ್’ ಸಾಧನೆಯೊಂದಿಗೆ ಭಾರತದ ಆಲ್ ರೌಂಡರ್ ಗಳ ಎಲೈಟ್ ಪಟ್ಟಿಗೆ ಆರ್.ಅಶ್ವಿನ್ ಸೇರ್ಪಡೆ

ಹೊಸದಿಲ್ಲಿ, ಫೆ.18: ಆರ್.ಅಶ್ವಿನ್ ಮೈದಾನದಲ್ಲಿದ್ದರೆ ಚೆಂಡಿರಲಿ ಇಲ್ಲವೇ ಬ್ಯಾಟ್ ಇರಲಿ ಅದರಲ್ಲಿ ತನ್ನ ಛಾಪನ್ನು ಮೂಡಿಸದೆ ಇರಲಾರರು. ಆಸ್ಟ್ರೇಲಿಯ ವಿರುದ್ಧ ಶನಿವಾರ ನಡೆದ ದ್ವಿತೀಯ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಭಾರತದ ಆಲ್ರೌಂಡರ್ ಅಶ್ವಿನ್ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ ನಂತರ ಚೆನ್ನೈ ಆಟಗಾರ ಬ್ಯಾಟಿಂಗ್‌ನಲ್ಲಿ ಉಪಯುಕ್ತ 37 ರನ್ ಗಳಿಸಿದ್ದಲ್ಲದೆ, ಅಕ್ಷರ್ ಪಟೇಲ್ರೊಂದಿಗೆ 8ನೇ ವಿಕೆಟಿಗೆ 114 ರನ್ ಜೊತೆಯಾಟ ನಡೆಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ಅಶ್ವಿನ್ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 5,000 ರನ್ ಪೂರೈಸಿದರು.
5,000 ರನ್ ಹಾಗೂ 700 ವಿಕೆಟ್‌ಗಳ ಮೂಲಕ ಡಬಲ್ ಸಾಧನೆ ಮಾಡಿದ ಭಾರತದ ಐದನೇ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು. ವಿನೂ ಮಂಕಡ್, ಎಸ್.ವೆಂಕಟರಾಘವನ್, ಕಪಿಲ್ದೇವ್ ಹಾಗೂ ಅನಿಲ್ ಕುಂಬ್ಳೆ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಈ ಮೈಲಿಗಲ್ಲು ತಲುಪಿದ ಭಾರತದ ಇತರ ಆಟಗಾರರಾಗಿದ್ದಾರೆ. ಶುಕ್ರವಾರ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ ತನ್ನ ಹೆಸರಲ್ಲಿ ಮತ್ತೊಂದು ದಾಖಲೆ ಬರೆದರು. ಕುಂಬ್ಳೆ ನಂತರ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ 100 ವಿಕೆಟ್ಗಳನ್ನು ಪೂರೈಸಿದ ಭಾರತದ 2ನೇ ಬೌಲರ್ ಎನಿಸಿಕೊಂಡಿದ್ದಾರೆ. ಆಸೀಸ್ ವಿರುದ್ಧದ 20ನೇ ಪಂದ್ಯದಲ್ಲಿ ಅಶ್ವಿನ್ ಈ ಸಾಧನೆ ಮಾಡಿದರೆ, ಕುಂಬ್ಳೆ ಇಷ್ಟೇ ಸಂಖ್ಯೆಯ ಪಂದ್ಯಗಳಲ್ಲಿ 111 ವಿಕೆಟ್ಗಳನ್ನು ಕಬಳಿಸಿದ್ದರು.







