ಮಹಿಳೆಯರ ಪ್ರೀಮಿಯರ್ ಲೀಗ್: ಸ್ಮೃತಿ ಆರ್‌ಸಿಬಿ ನಾಯಕಿ
ಹೊಸದಿಲ್ಲಿ, ಫೆ.18: ಭಾರತದ ಉಪ ನಾಯಕಿ ಸ್ಮೃತಿ ಮಂಧಾನ ನಿರೀಕ್ಷೆಯಂತೆಯೇ ಮೊದಲ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕಿಯಾಗಿ ನೇಮಕಗೊಂಡಿದ್ದಾರೆ.
ಇತ್ತೀಚೆಗೆ ಮುಂಬೈನಲ್ಲಿ ಡಬ್ಲ್ಯುಪಿಎಲ್ ಗಾಗಿ ನಡೆದ ಆಟಗಾರ್ತಿಯರ ಬಿಡ್ಡಿಂಗ್ನಲ್ಲಿ ಆರ್‌ಸಿಬಿ 3.40 ಕೋ.ರೂ. ವ್ಯಯಿಸಿ ಸ್ಮತಿ ಮಂಧಾನರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಇದು ಡಬ್ಲ್ಯುಟಿಎಲ್ ಬಿಡ್ಡಿಂಗ್ನಲ್ಲಿ ಆಟಗಾರ್ತಿಯೊಬ್ಬರು ಪಡೆದ ಗರಿಷ್ಠ ಮೊತ್ತವಾಗಿತ್ತು.
ಫ್ರಾಂಚೈಸಿಯು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಈ ಘೋಷಣೆ ಮಾಡಲಾಗಿದೆ. ಈ ವೀಡಿಯೊದಲ್ಲಿ ಆರ್ಸಿಬಿ ದಿಗ್ಗಜ ವಿರಾಟ್ ಕೊಹ್ಲಿ ಹಾಗೂ ತಂಡದ ಹಾಲಿ ನಾಯಕ ಎಫ್ಡು ಪ್ಲೆಸಿಸ್ ಅವರ ಸಂದೇಶವಿತ್ತು.
ಆರಂಭಿಕ ಆಟಗಾರ್ತಿ ಮಂಧಾನ 113 ಮಹಿಳಾ ಟಿ-20 ಪಂದ್ಯಗಳಲ್ಲಿ 123.19ರ ಸ್ಟ್ರೈಕ್ರೇಟ್ನಲ್ಲಿ
27.15ರ ಸರಾಸರಿಯಲ್ಲಿ 2,661 ರನ್ ಗಳಿಸಿದ್ದಾರೆ. ಮಂಧಾನ ಆಸ್ಟ್ರೇಲಿಯದಲ್ಲಿ ಬ್ರಿಸ್ಬೇನ್ ಹೀಟ್, ಸಿಡ್ನಿ ಥಂಡರ್ (ಮಹಿಳೆಯರ ಬಿಬಿಎಲ್), ವೆಸ್ಟರ್ನ್ ಸ್ಟೋರ್ಮ್
(ಕಿಯಾ ಸೂಪರ್ ಲೀಗ್) ಹಾಗೂ ಸದರ್ನ್ ಬ್ರೇವ್(ದಿ ಹಂಡ್ರಡ್)ನಲ್ಲಿ ಕಾಣಿಸಿಕೊಂಡಿದ್ದಾರೆ.
11 ಟಿ-20 ಪಂದ್ಯಗಳಲ್ಲಿ ಭಾರತದ ನಾಯಕತ್ವವನ್ನು ವಹಿಸಿರುವ ಮಂಧಾನ ಆರರಲ್ಲಿ ಜಯ ಹಾಗೂ ಐದು ಪಂದ್ಯಗಳಲ್ಲಿ ಸೋತಿದ್ದಾರೆ. 2021ರಲ್ಲಿ 22 ಪಂದ್ಯಗಳಲ್ಲಿ 855 ರನ್ ಗಳಿಸಿದ ಕಾರಣಕ್ಕೆ ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಯನ್ನು ಇತ್ತೀಚೆಗೆ ಗೆದ್ದುಕೊಂಡಿದ್ದರು.