ಜಮ್ಮು ಕಾಶ್ಮೀರ ವಿದ್ಯಾರ್ಥಿಗಳ ಪರ ವಾದ ಮಂಡಿಸಲು ಮುಂದಾಗದ ವಕೀಲರು: ಬೇರೆ ಪಟ್ಟಣಕ್ಕೆ ಪ್ರಕರಣ ವರ್ಗಾವಣೆ

ಮೀರಠ್: ಭಾರತ ತಂಡದ ವಿರುದ್ಧ ಟಿ-20 ಪಂದ್ಯದಲ್ಲಿ ಪಾಕಿಸ್ತಾನ ಗೆದ್ದದ್ದನ್ನು ಸಂಭ್ರಮಿಸಿದ ಆರೋಪದಲ್ಲಿ ಬಂಧಿತರಾಗಿರುವ ಜಮ್ಮು ಕಾಶ್ಮೀರದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸುಮಾರು 15 ತಿಂಗಳಿಂದ ಜೈಲಿನಲ್ಲಿದ್ದಾರೆ. ಅವರ ಪರವಾಗಿ ವಾದ ಮಂಡಿಸಲು ಯಾವ ವಕೀಲರೂ ಮುಂದಾಗದ ಹಿನ್ನೆಲೆಯಲ್ಲಿ ಆಗ್ರಾ ನ್ಯಾಯಾಲಯದಿಂದ ಬೇರೆ ಪಟ್ಟಣಕ್ಕೆ ಪ್ರಕರಣವನ್ನು ವರ್ಗಾಯಿಸುವಂತೆ ಅಲಹಾಬಾದ್ ಹೈಕೋರ್ಟ್ ಸೂಚನೆ ನೀಡಿದೆ.
ಕಾಶ್ಮೀರಿ ಯುವಕರನ್ನು ನಾವು ಪ್ರತಿನಿಧಿಸುವುದಿಲ್ಲ ಎಂದು ಆಗ್ರಾ ವಕೀಲರು ಘೋಷಿಸಿದ್ದಲ್ಲದೇ, ಕೆಲವರು ನ್ಯಾಯಾಲಯ ಆವರಣದಲ್ಲೇ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು. ಸಂತ್ರಸ್ತ ವಿದ್ಯಾರ್ಥಿಗಳು ರಾಜ್ಯ ಹೈಕೋರ್ಟ್‌ಗೆ ಮನವಿ ಸಲ್ಲಿಸಿ, ಪ್ರಕರಣವನ್ನು ಆಗ್ರಾದಿಂದ ಬೇರೆ ಕಡೆಗೆ ವರ್ಗಾಯಿಸುವಂತೆ ಕೋರಿದ್ದರು. ಹೈಕೋರ್ಟ್ ಈ ಸಂಬಂಧ ತೀರ್ಪು ನೀಡಿ ಪ್ರಕರಣದ ವರ್ಗಾವಣೆಗೆ ಅನುಮತಿ ನೀಡಿದೆ.
"ಆಗ್ರಾ ಜಿಲ್ಲಾ ವಕೀಲರ ಸಂಘ, ಅರ್ಜಿದಾರರ ಪರ ವಾದ ಮಂಡಿಸುವುದಿಲ್ಲ ಎಂದು ನಿರ್ಣಯ ಆಂಗೀಕರಿಸಿದೆ. ಈ ಸಂಬಂಧದಪತ್ರಿಕಾ ವರದಿಗಳನ್ನು ಇದರ ಜತೆಗೆ ಲಗತ್ತಿಸಲಾಗಿದೆ. ದೇಶದ್ರೋಹ ಪ್ರಕರಣದ ಆರೋಪಿ ವಿದ್ಯಾರ್ಥಿಗಳಿಗೆ ಆಗ್ರಾದಲ್ಲಿ ವಿಚಾರಣೆ ಎದುರಿಸಲು ಅನಾನುಕೂಲವಾಗುತ್ತಿದೆ. ಇವರ ಹೇಳಿಕೆಯನ್ನು ಪರಿಗಣಿಸಿ, ಸತ್ಯಾಂಶ ಮತ್ತು ಸಾಂದರ್ಭಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತುತ ಪ್ರಕರಣವನ್ನು ವರ್ಗಾವಣೆ ಮಾಡುವುದು ಸೂಕ್ತ" ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣವನ್ನು ಆಗ್ರಾ ನ್ಯಾಯಾಲಯದಿಂದ ಶಹಜಹಾನ್‌ಪುರ ಸಿಜೆಎಂ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಹೈಕೋರ್ಟ್ ಆದೇಶಿಸಿದೆ.







