ದೊಡ್ಡಬಳ್ಳಾಪುರ | ಕ್ರಿಕೆಟ್ ಪಂದ್ಯಾಟದ ವೇಳೆ ಅವಳಿ ಕೊಲೆ ಪ್ರಕರಣ: ಗುಂಡಿಕ್ಕಿ ಇಬ್ಬರು ಆರೋಪಿಗಳ ಸೆರೆ

ದೊಡ್ಡಬಳ್ಳಾಪುರ, ಫೆ.19: ದೊಡ್ಡಬೆಳವಂಗಲದಲ್ಲಿ ಎರಡು ದಿನಗಳ ಹಿಂದೆ ನಡೆದ ಇಬ್ಬರು ಯುವಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ರವಿವಾರ ಬೆಳಗ್ಗೆ ಪೊಲೀಸರು ಕಾಲಿಗೆ ಗುಂಡಿಕ್ಕಿ ಬಂಧಿಸಿರುವುದಾಗಿ ವರದಿಯಾಗಿದೆ.
ವಿನಯ್ ಹಾಗೂ ತ್ರಿಮೂರ್ತಿ ಬಂಧಿತ ಆರೋಪಿಗಳೆಂದು ತಿಳಿದುಬಂದಿದೆ.
ಆರೋಪಿಗಳು ನಗರದ ಡಿ.ಕ್ರಾಸ್ ಸಮೀಪದ ಪ್ಲೈ ಓವರ್ ನ ರೈಲ್ವೆ ಗೇಟ್ ಬಳಿ ಅವಿತಿರುವ ಖಚಿತ ಮಾಹಿತಿಯನ್ನು ಆಧರಿಸಿ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ದೊಡ್ಡಬೆಳವಂಗಲ ಠಾಣೆಯ ಪೊಲೀಸರು ಇಂದು ಬೆಳಗ್ಗೆ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ. ತಪ್ಪಿಕೊಳ್ಳುವ ಯತ್ನದಲ್ಲಿ ಆರೋಪಿಗಳು ಪೊಲೀಸ್ ಸಿಬ್ಬಂದಿ ಕರಾರ್ ಹುಸೇನ್, ಸುನೀಲ್ ಬಾಸಗಿ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಈ ಸಂದರ್ಭದಲ್ಲಿ ಆರೋಪಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳಾದ ಬಂಧಿತ ಆರೋಪಿಗಳು ಹಾಗೂ ಪೊಲೀಸ್ ಸಿಬ್ಬಂದಿಯನ್ನು ನಗರದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕ್ರಿಕೆಟ್ ಆಟದ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡಬೆಳವಂಗಲ ಬಸ್ ನಿಲ್ದಾಣದ ಬಳಿ ಶುಕ್ರವಾರ ಭರತ್ ಕುಮಾರ್ (23), ಪ್ರತೀಕ್ (17) ಎಂಬ ಇಬ್ಬರು ಯುವಕರನ್ನು ತಂಡವೊಂದು ಚಾಕುವಿನಿಂದ ಇರಿದು ಕೊಲೆ ಮಾಡಿದೆ.
ಇದನ್ನೂ ಓದಿ: ದೊಡ್ಡಬಳ್ಳಾಪುರ | ಕ್ರಿಕೆಟ್ ಪಂದ್ಯಾಟದ ವೇಳೆ ಜಗಳ: ಇಬ್ಬರು ಯುವಕರ ಹತ್ಯೆ







