ಯೂನಿಸೆಫ್ ಇಂಡಿಯಾದ ರಾಷ್ಟ್ರೀಯ ರಾಯಭಾರಿಯಾಗಿ ಆಯುಷ್ಮಾನ್ ಖುರಾನ ನೇಮಕ

ಹೊಸದಿಲ್ಲಿ: ಶನಿವಾರ ಯೂನಿಸೆಫ್ ಇಂಡಿಯಾವು ತನ್ನ ರಾಷ್ಟ್ರೀಯ ರಾಯಭಾರಿಯನ್ನಾಗಿ ಬಾಲಿವುಡ್‌ನ ಖ್ಯಾತ ನಟ ಆಯುಷ್ಮಾನ್ ಖುರಾನರನ್ನು ನೇಮಕ ಮಾಡಿದೆ. ಈ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟರಾದ ಖುರಾನಾ ಬಟರ್‌ಫ್ಲೈ ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳಾದ ಏಳು ಮಂದಿ ಮಕ್ಕಳೊಂದಿಗೆ ವೇದಿಕೆ ಹಂಚಿಕೊಂಡರು. ಈ ಸರ್ಕಾರೇತರ ಸಂಸ್ಥೆಯು ಶಿಕ್ಷಣಕ್ಕೆ ಪ್ರವೇಶ, ಮಕ್ಕಳ ಹಕ್ಕಿನ ಕುರಿತು ಜಾಗೃತಿ ಮತ್ತು ಲಿಂಗ ಸಮಾನತೆ ಹಾಗೂ ಋತುಚಕ್ರದಂತಹ ಹಲವಾರು ಸಾಮಾಜಿಕ ಸಂಗತಿಗಳ ಕುರಿತು ಬೇರು ಮಟ್ಟದಲ್ಲಿ ಅಸಾಧಾರಣ ಕೆಲಸ ಮಾಡುತ್ತಿದೆ ಎಂದು indiatoday.in ವರದಿ ಮಾಡಿದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಆಯುಷ್ಮಾನ್ ಖುರಾನ, "ಯುನಿಸೆಫ್‌ನ ತಾರಾ ಪ್ರಚಾರಕನಾಗಿ ನಾನು ಮಕ್ಕಳೊಂದಿಗೆ ಸಂವಾದಿಸಿದೆ ಮತ್ತು ಅಂತರ್ಜಾಲ ಸುರಕ್ಷತೆ, ಅಂತರ್ಜಾಲ ವಂಚನೆ, ಮಾನಸಿಕ ಆರೋಗ್ಯ ಹಾಗೂ ಲಿಂಗ ಸಮಾನತೆ ಕುರಿತಂತೆ ಮಾತನಾಡಿದೆ. ಯೂನಿಸೆಫ್‌ನ ಈ ಹೊಸ ಪಾತ್ರದಲ್ಲಿ ನಾನು ಮಕ್ಕಳ ಹಕ್ಕಿನ ಕುರಿತು ಬಲವಾದ ಧ್ವನಿ ಎತ್ತುತ್ತೇನೆ. ಮುಖ್ಯವಾಗಿ, ಅವರ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡುವ ಸಂಗತಿಗಳನ್ನು ಪರಿಹರಿಸಲು ನೆರವು ಒದಗಿಸುತ್ತೇನೆ" ಎಂದು ಹೇಳಿದ್ದಾರೆ.
ಖುರಾನಾ ಕಳೆದ ಎರಡು ವರ್ಷಗಳಿಂದ ಯೂನಿಸೆಫ್‌ನ ತಾರಾ ಪ್ರಚಾರಕರಾಗಿದ್ದು, ಅವರು ತಮ್ಮ ಬಲಿಷ್ಠ ಧ್ವನಿಯನ್ನು ಮಕ್ಕಳ ಪರ ಹಾಗೂ ಅಪಾಯಕಾರಿ ಸಾಮಾಜಿಕ ನಿಯಮಗಳು ಹಾಗೂ ಲಿಂಗ ತಾರತಮ್ಯದಂತಹ ಸವಾಲನ್ನು ಎದುರಿಸಲು ಬಳಸಿದ್ದಾರೆ ಎಂದು ಯೂನಿಸೆಫ್ ಇಂಡಿಯಾದ ಪ್ರತಿನಿಧಿ ಸಿಂಥಿಯಾ ಮೆಕ್‌ಕ್ಯಾಫ್ರಿ ಶ್ಲಾಘಿಸಿದ್ದಾರೆ.
ಆಯುಷ್ಮಾನ್ ಖುರಾನ ಹಲವಾರು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ಜಾಗತಿಕ ಮಕ್ಕಳ ದಿನಾಚರಣೆ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಅಂತಾರಾಷ್ಟ್ರೀಯ ಬಾಲಕಿಯರ ದಿನಾಚರಣೆ, ಜಾಗತಿಕ ಬಾಲ ಕಾರ್ಮಿಕ ವಿರೋಧಿ ದಿನ ಹಾಗೂ ಸುರಕ್ಷಿತ ಅಂತರ್ಜಾಲ ದಿನಾಚರಣೆಯ ಪರ ದೊಡ್ಡ ದನಿಯಲ್ಲಿ ಮಾತನಾಡುತ್ತಾ, ತಮ್ಮ ಪ್ರಭಾವ ಬೀರುತ್ತಿದ್ದಾರೆ.







