ಬಾರ್ಡರ್-ಗವಾಸ್ಕರ್ ಟ್ರೋಫಿ ಉಳಿಸಿಕೊಂಡ ಭಾರತ: ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಗೆಲುವು

ಹೊಸದಿಲ್ಲಿ: ಆರ್.ಅಶ್ವಿನ್-ರವೀಂದ್ರ ಜಡೇಜಾ ಜೋಡಿಯ ಅಮೋಘ ಬೌಲಿಂಗ್ ನೆರವಿನಿಂದ ಬಾರ್ಡರ್-ಗಾವಸ್ಕರ್ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೆ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಆರು ವಿಕೆಟ್ ಅಂತರದ ಗೆಲುವು ಸಾಧಿಸುವ ಮೂಲಕ ಭಾರತ ತಂಡವು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಈ ಮೂಲಕ ಭಾರತವು ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ.
ನಾಲ್ಕನೇ ಇನ್ನಿಂಗ್ಸ್‌ನಲ್ಲಿ 115 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಚೇತೇಶ್ವರ ಪೂಜಾರ ಅವರ ಅಜೇಯ 31 ರನ್‌ಗಳ ನೆರವಿನಿಂದ ಸುಲಭವಾಗಿ ಗುರಿ ತಲುಪಿತು. 26.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿತು.
ರೋಹಿತ್ ಶರ್ಮಾ 31 ರನ್, ಭರತ್ ಔಟಾಗದೆ 23 ರನ್, ವಿರಾಟ್ ಕೊಹ್ಲಿ 20 ರನ್, ಗಳಿಸಿದರು. ನಥಾನ್ ಲಿಯೊನ್ 2 ವಿಕೆಟ್(2-49) ಪಡೆದರು.
ಇದೇ ವೇಳೆ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 25,000 ಅಂತರಾಷ್ಟ್ರೀಯ ರನ್‌ಗಳನ್ನು ವೇಗವಾಗಿ ಗಳಿಸಿದ ಬ್ಯಾಟರ್ ಎನಿಸಿಕೊಂಡರು.
ಇಂದಿನ ಪಂದ್ಯದ ಆರಂಭದಲ್ಲಿ, ರವೀಂದ್ರ ಜಡೇಜ ಏಳು ವಿಕೆಟ್‌ಗಳ ಸಾಧನೆಯನ್ನು ದಾಖಲಿಸಿದರೆ, ರವಿಚಂದ್ರನ್ ಅಶ್ವಿನ್ ಮೂರು ವಿಕೆಟ್‌ಗಳನ್ನು ಪಡೆದರು. ಈ ಇಬ್ಬರ ಸಾಹಸದಿಂದ ಆತಿಥೇಯರು ಆಸ್ಟ್ರೇಲಿಯವನ್ನು 2ನೇ ಇನಿಂಗ್ಸ್ ನಲ್ಲಿ 113 ರನ್‌ಗಳಿಗೆ ಆಲೌಟ್ ಮಾಡಿದರು.
ಮೊದಲ ಇನಿಂಗ್ಸ್‌ನಲ್ಲಿ 263 ರನ್ ಗಳಿಸಿದ್ದ ಆಸ್ಟ್ರೇಲಿಯ ಒಂದು ರನ್‌ನ ಮೊದಲ ಇನಿಂಗ್ಸ್ ಮುನ್ನಡೆ ಪಡೆದಿದ್ದ ಹಿನ್ನೆಲೆಯಲ್ಲಿ ಭಾರತಕ್ಕೆ ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 115 ರನ್‌ಗಳ ಟಾರ್ಗೆಟ್ ನೀಡಲಾಯಿತು.