ಗರ್ಭನಿರೋಧಕ ಶಸ್ತ್ರಚಿಕಿತ್ಸೆ ಮಾಡಿಕೊಂಡದ್ದಕ್ಕೆ 11 ಮಕ್ಕಳ ತಾಯಿಯನ್ನು ಮನೆಯಿಂದ ಹೊರಗಟ್ಟಿದ ಪತಿ

ಕಿಯೋಂಝಾರ್: ತನ್ನ ಇಚ್ಛೆಗೆ ವಿರುದ್ಧವಾಗಿ ಶಾಶ್ವತ ಗರ್ಭನಿರೋಧಕ ಶಸ್ತ್ರಚಿಕಿತ್ಸೆಗೆ ಒಳಗಾದ ಬುಡಕಟ್ಟು ಸಮುದಾಯದ 11 ಮಕ್ಕಳ ತಾಯಿಯನ್ನು ಆಕೆಯ ಪತಿ ಮನೆಯಿಂದ ಹೊರ ಹಾಕಿರುವ ಘಟನೆ ಒಡಿಶಾದ ಕಿಯೋಂಝಾರ್ ಜಿಲ್ಲೆಯಲ್ಲಿ ನಡೆದಿದೆ ಎಂದು ndtv.com ವರದಿ ಮಾಡಿದೆ.
ಮೂರು ದಿನಗಳ ಹಿಂದೆ ತನ್ನನ್ನು ತನ್ನ ಪತಿ ಮನೆಯಿಂದ ಹೊರ ಹಾಕಿದ ನಂತರ ಜಾನಕಿ ಡೆಹುರಿ ಎಂಬ ಮಹಿಳೆಯು ತನ್ನ ಕೆಲವು ಮಕ್ಕಳೊಂದಿಗೆ ಡಿಮಿರಿಯಾ ಗ್ರಾಮದಲ್ಲಿರುವ ತನ್ನ ಮನೆಯೆದುರು ವಾಸಿಸುತ್ತಿದ್ದಾಳೆ ಎಂದು ವರದಿಯಾಗಿದೆ.
ಪ್ರತಿ ವರ್ಷ ಮಕ್ಕಳಿಗೆ ಜನ್ಮ ನೀಡುವುದರಿಂದ ಆಗುವ ಪ್ರತಿಕೂಲ ಪರಿಣಾಮದ ಕುರಿತು ಸ್ಥಳೀಯ ಆಶಾ ಕಾರ್ಯಕರ್ತೆಯೊಬ್ಬರು ಆಕೆಗೆ ಮನವರಿಕೆ ಮಾಡಿಕೊಟ್ಟ ನಂತರ ಜಾನಕಿ ಡೆಹುರಿ ಶಾಶ್ವತ ಗರ್ಭನಿರೋಧಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ವಿವಾಹವಾದ ಹನ್ನೊಂದು ವರ್ಷಗಳ ಅವಧಿಯಲ್ಲಿ ಆಕೆ ಹನ್ನೊಂದು ಮಕ್ಕಳಿಗೆ ಜನ್ಮ ನೀಡಿದ್ದು, ಈ ಪೈಕಿ ಓರ್ವ ಮಗು ಮೃತಪಟ್ಟಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಾನಕಿ ಡೆಹುರಿ, "ನನ್ನ ಮಕ್ಕಳೆಲ್ಲ ಬೆಳೆಯುತ್ತಿರುವ ಹೊತ್ತಿನಲ್ಲಿ ಪ್ರತಿ ವರ್ಷ ಗರ್ಭಿಣಿಯಾಗುವುದು ನನಗೆ ಮುಜುಗರದ ಸಂಗತಿಯಾಗಿದೆ. ಗ್ರಾಮದ ಹಲವಾರು ಮಹಿಳೆಯರು ಗರ್ಭನಿರೋಧಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ, ನನ್ನ ಪತಿಗೆ ಮಾತ್ರ ಇದು ಅರ್ಥವಾಗಿಲ್ಲ ಮತ್ತು ನನ್ನನ್ನು ಮನೆಯಿಂದ ಹೊರಗೆ ದೂಡಿದ್ದಾನೆ" ಎಂದು ಅಳಲು ತೋಡಿಕೊಂಡಿದ್ದಾರೆ.
ಮತ್ತೊಂದೆಡೆ ಆಕೆಯ ಪತಿ ರಾಬಿ, ನನ್ನ ಪತಿ ಗರ್ಭನಿರೋಧಕ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೂಲಕ ಅಪರಾಧವೆಸಗಿದ್ದಾಳೆ ಎಂದು ಪ್ರತಿಪಾದಿಸಿದ್ದಾನೆ. "ನಾವು ಭುಯಾನ್ ಸಮುದಾಯಕ್ಕೆ ಸೇರಿದ್ದು, ನಮ್ಮ ಸಮುದಾಯದ ನಂಬಿಕೆ ಪ್ರಕಾರ, ಮಹಿಳೆಯರು ಗರ್ಭನಿರೋಧಕ ಶಸ್ತ್ರಚಿಕಿತ್ಸೆಗೆ ಒಳಗಾದರೆ ನಮ್ಮ ಮುತ್ತಾತಂದಿರಿಗೆ ನೀರು ದೊರೆಯುವುದಿಲ್ಲ. ನಾನು ಇಂತಹ ಶಸ್ತ್ರಚಿಕಿತ್ಸೆಗೆ ಬಲವಾಗಿ ವಿರೋಧಿಸಿದ್ದೆ" ಎಂದು ಹೇಳಿದ್ದಾನೆ.
ಸತತವಾಗಿ ಗರ್ಭಿಣಿಯಾಗುತ್ತಿರುವುದರಿಂದ ಆಕೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿತ್ತು ಎಂದು ಜಾನಕಿ ಡೆಹುರಿಗೆ ಗರ್ಭನಿರೋಧಕ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಮನವೊಲಿಸಿದ ಆಶಾ ಕಾರ್ಯಕರ್ತೆ ಬಿಜಯ್‌ಲಕ್ಷ್ಮಿ ಬಿಸ್ವಾಲ್ ತಿಳಿಸಿದ್ದಾರೆ.
ಈ ನಡುವೆ, ತೆಲ್ಕೋಯಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪ್ರೀತೀಶ್ ಆಚಾರ್ಯ ಅವರು ಪರಿಸ್ಥಿತಿಯನ್ನು ರಾಬಿಗೆ ಮನವರಿಕೆ ಮಾಡಿಕೊಟ್ಟು, ಆತನ ಪತ್ನಿಯನ್ನು ಸ್ವೀಕರಿಸುವಂತೆ ಮಾಡಲು ಪ್ರಯತ್ನ ನಡೆಸಿದ್ದಾರೆ.







